ಕಾಸರಗೋಡು, ಜ 11 (DaijiworldNews/DB): ಇಸ್ಲಾಮಿಕ್ ಸ್ಟೇಟ್ (ಐಎಸ್) ಹಾಗೂ ಅಲ್ ಖೈದಾ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್ ಕೇರಳದಲ್ಲಿ ಈಗಲೂ ಸಕ್ರಿಯವಾಗಿದೆ ಎಂಬ ಆಘಾತಕಾರಿ ಅಂಶವೊಂದು ಹೊರ ಬಿದ್ದಿದೆ. ಕೇರಳದಲ್ಲಿ ಈ ಎರಡು ಸಂಘಟನೆಗಳ ಸಕ್ರಿಯ ಚಟುವಟಿಕೆಗಳನ್ನು ಎನ್ಐಎ ಪತ್ತೆ ಹಚ್ಚಿದೆ.
ಕೇರಳದಲ್ಲಿ ಕೋಮು ಹಿಂಸಾಚಾರ ನಡೆಸುವ ಉದ್ದೇಶ ಹೊಂದಿರುವಐಎಸ್ ಸಂಘಟನೆಯು ಇದೇ ಕಾರಣಕ್ಕಾಗಿ ಕೇರಳದಲ್ಲಿ ಮಲಯಾಳ ಟೆಲಿಗ್ರಾಂ ಚಾನೆಲ್ನ್ನು ಹೊಂದಿದೆ. ಇದರ ಹಿಂದೆ ಕೇರಳದ ಉಗ್ರಗಾಮಿ ಸಂಘಟನೆಯೊಂದು ಕೂಡಾ ಕಾರ್ಯಾಚರಿಸುತ್ತಿರುವ ಶಂಕೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಐಎಸ್ ಬೆಂಬಲಿಗರನ್ನು ಒಗ್ಗೂಡಿಸುವುದಕ್ಕಾಗಿ ಈ ಚಾನೆಲ್ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ದೇಶಾದ್ಯಂತ ಗಲಭೆ ಸೃಷ್ಟಿಸುವುದೂ ಇದರ ಉದ್ದೇಶವಾಗಿದೆ. ಅದಕ್ಕಾಗಿ ಸ್ಲೀಪರ್ ಸೆಲ್ಗಳನ್ನೂ ಸಕ್ರಿಯಗೊಳಿಸಲಾಗಿದೆ ಎಂದೂ ತಿಳಿದು ಬಂದಿದೆ.
ಇನ್ನು ಅಲ್ಖೈದಾದೊಂದಿಗೂ ಈ ಸ್ಲೀಪರ್ ಸೆಲ್ ಸಂಬಂಧ ಹೊಂದಿದೆ. ಅಲ್ಲದೆ ತುರ್ಕಿಯ ಫೌಂಡೇಶನ್ ಫಾರ್ ಹ್ಯೂಮನ್ ರೈಟ್ಸ್ ಆಯಂಡ್ ಹ್ಯುಮಾನಿಟೇರಿಯನ್ ರಿಲೀಫ್ ಎಂಬ ಸಂಘಟನೆಯೊಂದಿಗೆ ಕೂಡಾ ಇದಕ್ಕೆ ಸಂಬಂಧವಿದೆ. ಈ ಎಲ್ಲಾ ಸಂಘಟನೆಗಳು ಒಟ್ಟಾಗಿ ಸ್ಲೀಪರ್ ಸೆಲ್ನ್ನು ಕೇರಳದಲ್ಲಿ ನಡೆಸುತ್ತಿರುವ ಕುರಿತು ಮಾಹಿತಿ ಎನ್ಐಎಗೆ ಲಭಿಸಿದೆ ಎನ್ನಲಾಗಿದೆ.