ಮಂಗಳೂರು, ಜ 11 (DaijiworldNews/HR): ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದ ಉಂಟಾದ ಹೊಗೆ ಮಂಗಳೂರು ನಗರದವರೆಗೂ ವ್ಯಾಪಿಸಿದೆ.
ಮಂಗಳವಾರ ರಾತ್ರಿ ನಗರದ ವಿವಿಧೆಡೆ ಮಂಜು ಕವಿದಂತೆ ಹೊಗೆ ಆವರಿಸಿದ್ದು, ಘಾಟು ವಾಸನೆಯೂ ಇತ್ತು. ಕುಂಟಿಕಾನ, ದೇರೆಬೈಲ್, ಕೊಂಚಾಡಿ, ಕೆಪಿಟಿ ಮೊದಲಾದ ಕಡೆ ಹೊಗೆ ವಾತಾವರಣ, ವಾಸನೆ ಹೆಚ್ಚಿದ್ದು ಸಾರ್ವಜನಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಅಗ್ನಿ ಶಾಮಕ ಠಾಣೆಗೂ ಕರೆ ಮಾಡಿ ವಿಚಾರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಗ್ನಿ ಶಾಮಕ ದಳದ ಅಧಿಕಾರಿಗಳು, ರಾತ್ರಿ ಹೊತ್ತು ಗಾಳಿ ಪಶ್ಚಿಮ ದಿಕ್ಕಿಗೆ ಬೀಸುವುದರಿಂದ ಗಾಳಿಯೊಂದಿಗೆ ಹೊಗೆ ಆವರಿಸಿಕೊಂಡಿದ್ದು, ಜತೆಗೆ ಗಾಳಿಯ ವೇಗವೂ ಎಂದಿಗಿಂತ ಹೆಚ್ಚಿದೆ. ಪಚ್ಚನಾಡಿಯಲ್ಲಿ ಈಗಲೂ ಹೊಗೆ ಏಳುತ್ತಿದ್ದು, ನಂದಿಸುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ ಎಂದಿದ್ದಾರೆ.