ಬಂಟ್ವಾಳ, ಜ 10 (DaijiworldNews/DB): ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರ ದೇವಾಲಯವನ್ನು ಸೂಕ್ಷ್ಮ ವಲಯವನ್ನಾಗಿ ಘೋಷಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ್ದು, ಜಿಲ್ಲಾಧಿಕಾರಿ ವರದಿ ಬಳಿಕ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಕಾರ್ಕಳ ತಿಳಿಸಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರೊಂದಿಗೆ ಕಾರಿಂಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸಾನಿಧ್ಯಕ್ಕೆ ಅಪಾಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಭಕ್ತರು ಮತ್ತು ಸಂಘಟನೆಯವರು ಸ್ಥಳೀಯ ಶಾಸಕ ಹಾಗೂ ನನ್ನ ಗಮನ ಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದ್ದು, ಧಾರ್ಮಿಕ ಸೂಕ್ಮ ಪ್ರದೇಶ ಘೋಷಣೆ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಕಾರಿಂಜ ಕ್ಷೇತ್ರವನ್ನು ಪಾವಿತ್ರ್ಯತೆಯ ಧಾರ್ಮಿಕ ಕೇಂದ್ರವಾಗಿಸುವುದರ ಜೊತೆಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಹಲವು ಬಾರಿ ಕಾರಿಂಜ ಕ್ಷೇತ್ರದಲ್ಲಿ ಗಣಿಗಾರಿಕೆಗೆ ಕಡಿವಾಣ ಸಹಿತ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ತನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇವೆ ಎಂದು ಅವರು ತಿಳಿಸಿದರು.
ಕಾರಿಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಪ್ರಮುಖರಾದ ವೆಂಕಟರಮಣ ಮುಚ್ಚಿನ್ನಾಯ, ಅಜಿತ್ ಶೆಟ್ಟಿ, ಜಯಲಕ್ಷ್ಮೀ, ಸುದರ್ಶನ ಬಜ, ನರಸಿಂಹ ಮಾಣಿ, ರವಿ ಕೆಂಪುಗುಡ್ಡೆ, ಶರತ್ ಕುಮಾರ್, ರಮೇಶ್, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ, ಪುಷ್ಪರಾಜ ಚೌಟ, ಮಾಧವ ಮಾವೆ, ಹರೀಶ್ ಪ್ರಭು, ರಾಮಕೃಷ್ಣ ಮಯ್ಯ, ಗಣೇಶ್ ಭಟ್, ಶುಭಕರ ಶೆಟ್ಟಿ, ಗಣಿ ಇಲಾಖೆಯ ಮಹದೇಶ್ವರ, ಗ್ರಾಮ ಕರಣಿಕೆ ಆಶಾ ಮೆಹಂದಲೆ, ಮೆಸ್ಕಾಂ ಇ.ಇ. ಪ್ರಶಾಂತ್ ಪೈ ಮತ್ತಿತರರು ಉಪಸ್ಥಿತರಿದ್ದರು.