ಮಂಗಳೂರು: 30 ವರ್ಷಗಳ ಸೇವೆಯ ನಂತರ ಕೆಲಸ ಕಳೆದುಕೊಂಡ ಪಾಲಿಕೆ ವಾಲ್ವ್ ಮ್ಯಾನ್- ತೀವ್ರ ಸಂಕಷ್ಟದಲ್ಲಿ ಕುಟುಂಬ
Tue, Jan 10 2023 10:51:23 AM
ಮಂಗಳೂರು, ಜ 10 (DaijiworldNews/DB): ಮಂಗಳೂರು ಮಹಾನಗರ ಪಾಲಿಕೆಯಲ್ಲಿ 30 ವರ್ಷಗಳ ಕಾಲ ವಾಲ್ವ್ ಮ್ಯಾನ್ ಆಗಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಇದೀಗ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನಿಷ್ಠ ಮೂಲ ಸೌಕರ್ಯವೂ ಇಲ್ಲದೆ ಟರ್ಪಾಲ್ ಮುಚ್ಚಿ ಕಟ್ಟಿರುವ ಮನೆಯೂ ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿಯೇ ಕುಟುಂಬ ದಿನದೂಡುತ್ತಿದೆ.
ಪಾಲಿಕೆಯಲ್ಲಿ ವಾಲ್ವ್ ಮ್ಯಾನ್ ಆಗಿದ್ದ ಕೆ. ಗೋವಿಂದ ಅವರೇ ದಯನೀಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವವರು. ಕಳೆದೆರಡು ತಿಂಗಳಿನಿಂದ ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿರುವ ಅವರನ್ನು ಮಹಾನಗರ ಪಾಲಿಕೆ ಆಡಳಿತ ದಯನೀಯ ಸ್ಥಿತಿಗೆ ತಂದಿದೆ. ಆಕಾಶಭವನ ಮುಳ್ಳಕಾಡು ಎಂಬಲ್ಲಿ ಪತ್ನಿ ಹಾಗೂ ಪುತ್ರಿಯೊಂದಿಗೆ ಟರ್ಪಾಲ್ ಹೊದಿಕೆ ಹಾಕಿರುವ ಸಣ್ಣ ಮನೆಯಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೆ ವಾಸವಾಗಿದ್ದಾರೆ.
ತಮ್ಮ ಜೀವನದ ಪರಿಸ್ಥಿತಿಯ ಬಗ್ಗೆ ದಾಯ್ಜಿವರ್ಲ್ಡ್ನೊಂದಿಗೆ ಮಾತನಾಡಿದ ಗೋವಿಂದ, ಕಳೆದ 30 ವರ್ಷಗಳಿಂದ ಮಂಗಳೂರಿನ ವಿವಿಧ ವಾರ್ಡ್ಗಳಲ್ಲಿ ವಾಲ್ವ್ ಮ್ಯಾನ್ ಆಗಿ ಕೆಲಸ ಮಾಡಿದ್ದೆ. ಎರಡು ತಿಂಗಳ ಹಿಂದೆ ವಿನಾಕಾರಣ ನನ್ನನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಆ ಬಗ್ಗೆ ಯಾವುದೇ ಪರಿಹಾರ ಪತ್ರವನ್ನೂ ನೀಡಿಲ್ಲ. ನಾನು ಕಳೆದ 30 ವರ್ಷಗಳಿಂದ ಯಾವುದೇ ದೂರುಗಳಿಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೆ. ನನ್ನ ವಿರುದ್ಧ ದೂರು ಬಂದಿದೆ ಎಂದು ಕಾರ್ಪೊರೇಟರ್ ಆರೋಪಿಸಿದರು. ನಾನು ನನ್ನ ಕೆಲಸ ಕಳೆದುಕೊಂಡ ನಂತರ ನನಗೆ ದೈನಂದಿನ ಜೀವನವೇ ಕಷ್ಟವಾಗಿದೆ. ನಾವು ಆಹಾರಕ್ಕಾಗಿ ಸಹ ಕಷ್ಟ ಪಡುತ್ತಿದ್ದೇವೆ. ಗ್ಯಾಸ್ ಸಂಪರ್ಕದಂತಹ ಯಾವುದೇ ರೀತಿಯ ಸೌಲಭ್ಯಗಳನ್ನು ಹೊಂದಿಲ್ಲ. ಆದರೆ ಇತ್ತೀಚೆಗೆ ನಾವು ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದ್ದೇವೆ ಎಂದು ಅವಲತ್ತುಕೊಂಡಿದ್ದಾರೆ.
ನಾನು ಕೆಲಸ ಮಾಡುವುದಿಲ್ಲ, ಸಮಯಪಾಲನೆ ಮಾಡುತ್ತಿಲ್ಲ ಎಂದು ಕಾರ್ಪೊರೇಟರ್ವೊಬ್ಬರು ಕಿರುಕುಳ ನೀಡುತ್ತಿದ್ದರು. ಕಳೆದ 30 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ನನ್ನ ಮೇಲೆ ಬಂದಿರುವ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದೇನೆ. ನನ್ನನ್ನು ಕೆಲಸದಿಂದ ತೆಗೆದು ಹಾಕಿದ ಮೇಲೆ ಆ ಕೆಲಸಕ್ಕೆ ಇನ್ನೊಬ್ಬರ ನೇಮಕವಾಗಿದೆ. ನಾನು ನನ್ನ ಕೆಲಸದಲ್ಲಿ ಅಸಹಾಯಕನಾಗಿದ್ದೆ. ಕುಟುಂಬದಲ್ಲಿಯೂ ಜಮೀನಿನ ಸಮಸ್ಯೆ ಇರುವುದರಿಂದ ಜೀವನದ ದಿಕ್ಕು ಕಾಣದಾಗಿದೆ. ಮಗಳಿಗೆ ಕೆಲಸವಿಲ್ಲ. ಯಾವೊಬ್ಬ ಜನಪ್ರತಿನಿಧಿಯೂ ಸಹಾಯ ಮಾಡಿಲ್ಲ. ಆಯುಕ್ತರ ಸಹಾಯದ ಭರವಸೆ ನೀಡಿದ್ದರೂ, ಈವರೆಗೆ ಯಾವ ಸ್ಪಂದನೆಯೂ ಸಿಕ್ಕಿಲ್ಲ. ಚುನಾವಣೆ ಸಂದರ್ಭದಲ್ಲಿ ಮನೆಗೆ ಬಂದು ಪರಿಸ್ಥಿತಿ ನೋಡಿ ಹೋದವರು ಮತ್ತೆ ಬಂದಿಲ್ಲ. ನನ್ನ ದೈನಂದಿನ ಜೀವನ ಸಾಗಿಸಲು ನನಗೊಂದು ಕೆಲಸ ಬೇಕು ಎಂದು ಅಳಲು ತೋಡಿಕೊಂಡರು.
ಶಾಸಕ ಭರತ್ ವೈ. ಶೆಟ್ಟಿ ಅವರು ನಾಲ್ಕು ವರ್ಷಗಳ ಹಿಂದೆ ನಮ್ಮ ಮನೆಗೆ ಬಂದು ನಮ್ಮ ಪರಿಸ್ಥಿತಿ ನೋಡಿ ಹೋದವರು ಮತ್ತೆ ಬಂದಿಲ್ಲ. ಕಾಲಿನ ಸಮಸ್ಯೆಯಂತಹ ಆರೋಗ್ಯ ಸಮಸ್ಯೆಗಳಿರುವುದರಿಂದ ನಾನು ಹೆಚ್ಚು ದಿನ ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲದೆ ಥೈರಾಯ್ಡ್, ಅಪೆಂಡಿಸೈಟಿಸ್ನಿಂದ ಬಳಲುತ್ತಿದ್ದು, ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ಮಾಡಿದ್ದರು. ಆದರೆ ಮನೆಯ ಆರ್ಥಿಕ ಸಮಸ್ಯೆಯಿಂದಾಗಿ ನಾನು ಶಸ್ತ್ರಚಿಕಿತ್ಸೆಗೆ ನಿರಾಕರಿಸಿದೆ. ತಂದೆ ಕೆಲಸವನ್ನೂ ಕಳೆದುಕೊಂಡಿರುವುದರಿಂದ ಮುಂದೆ ಆರೋಗ್ಯ ಸಮಸ್ಯೆ ನಿವಾರಣೆಗೆ ತೀರಾ ಕಷ್ಟ ಇದೆ ಎಂದು ಗೋವಿಂದ ಅವರ ಪುತ್ರಿ ಪ್ರಜ್ಞಾ ಮನೆಯ ಸಂಕಷ್ಟದ ಕುರಿತು ವಿವರಿಸಿದರು.
ಈ ಪರಿಸ್ಥಿತಿಯಲ್ಲಿ ಮನಸ್ಸಿಗೆ ಒಂದು ದಿನವೂ ಶಾಂತಿ ಸಿಗುತ್ತಿಲ್ಲ. ನನ್ನ ತಂದೆ ಮದ್ಯವ್ಯಸನಿ ಎಂದು ಅವರು ಆರೋಪಿಸಿದ್ದಾರೆ. ಆದರೆ ಒಂದು ವೇಳೆ ಅವರು ಮದ್ಯವ್ಯಸನಿಯೇ ಆಗಿದ್ದರೆ ನಾನು ಶಾಲೆ, ಕಾಲೇಜಿಗೆ ಹೋಗುತ್ತಿರಲಿಲ್ಲ. ಒಂದು ರಾತ್ರಿಯಂತೂ ನಾನು ಹೆತ್ತವರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ಪ್ರಜ್ಞಾ ಹೇಳುತ್ತಾರೆ.
ಇನ್ನು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಗೋವಿಂದ ಅವರ ಪರಿಚಯವಿದೆ. ಅವರು ಕಳೆದ ಹಲವು ವರ್ಷಗಳಿಂದ ಪ್ರಾಮಾಣಿಕ ಉದ್ಯೋಗಿ, ಅವರು ಕಾರ್ಪೊರೇಟರ್ ರಂಜಿನಿ ಕೋಟ್ಯಾನ್ ಮತ್ತು ಶಶಿಧರ್ ಹೆಗ್ಡೆ ಅವರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ಅವರಿಬ್ಬರೂ ಗೋವಿಂದ ಅವರ ಪರಿಸ್ಥಿತಿ ಬಗ್ಗೆ ಕನಿಷ್ಠ ಯೋಚನೆಯನ್ನೂ ಮಾಡಿಲ್ಲ. ಅವರನ್ನು ಕೆಲಸದಿಂದ ವಜಾಗೊಳಿಸಿ ಪಾಲಿಕೆ ಪ್ರತಿನಿಧಿಗಳು ಏನು ಗಳಿಸಿದ್ದಾರೆ ಗೊತ್ತಿಲ್ಲ. ಇದುವರೆಗೆ ಗೋವಿಂದರ ವಿರುದ್ದ ಯಾವುದೇ ಲಿಖಿತ ದೂರು ಬಂದಿಲ್ಲ. ಅವರು ಮದ್ಯವ್ಯಸನಿಯೂ ಅಲ್ಲ. ಗ್ಯಾಸ್ ಸಂಪರ್ಕವೂ ಅವರ ಮನೆಗಿಲ್ಲ. ಇದುವರೆಗೆ ಕಾರ್ಪೋರೇಟರ್ಗಳಾಗಲೀ, ಎಂಜಿನಿಯರ್ಗಳಾಗಲೀ ಅವರ ಮನೆಗೆ ಭೇಟಿಕೊಟ್ಟಿಲ್ಲ. ಅವರಿಗೆ ಕೆಲಸ ನೀಡದಿದ್ದಲ್ಲಿ ಪಾಲಿಕೆ ಮುಂಭಾಗ ನಾವು ಪ್ರತಿಭಟನೆಗಿಳಿಯುತ್ತೇವೆ ಎಂದರು.