ಮಂಗಳೂರು, ಜ 09 ( DaijiworldNews/SM): ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ತ್ಯಾಜ್ಯ ಸಂಗ್ರಹ ಮಾಡುವ ಸಫಾಯಿ ಕರ್ಮಚಾರಿಗಳ ಸಂಘ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಕೂಳೂರು ಗೋಲ್ಡ್ ಪಿಂಚ್ ಮೈದಾನದ ಮುಂದೆ ತ್ಯಾಜ್ಯ ಸಂಗ್ರಹ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಅಪರಾಹ್ನ ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ಮಂಗಳೂರು ಮಿನಿ ವಿಧಾನ ಸೌಧದವರೆಗೆ ರ್ಯಾಲಿ ನಡೆಸಲಾಯಿತು. ರಾಜ್ಯ ಸರಕಾರವು ನಿಗದಿಗೊಳಿಸಿದ ವೇತನವನ್ನು ಆಂಟನಿ ವೇಸ್ಟ್ ಕಂಪನಿಯವರು ನೀಡದೆ ವಂಚಿಸಿದ್ದಾರೆ. ಅದನ್ನು ಯಥಾವತ್ತಾಗಿ ನೀಡಬೇಕು. ಕಾರ್ಮಿಕರ ಗಳಿಕೆ ರಜೆ ಮತ್ತು ನಿಗದಿತ ರಜೆ, ಉಪಹಾರ ಭತ್ತೆ ನೀಡಬೇಕು. ನಾದುರಸ್ತಿ ವಾಹನಗಳನ್ನು ಬದಲಿಸಬೇಕು. ನಿಗದಿತ ಸಮಯಕ್ಕಿಂತ ಹೆಚ್ಚುವರಿಯಾಗಿ ದುಡಿಸುವುದನ್ನು ನಿಲ್ಲಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟರಲ್ಲದೆ ಅವುಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮೇಯರ್ ಜಯಾನಂದ ಅಂಚನ್, ಆಯುಕ್ತ ಅಕ್ಷಯ್ ಶ್ರೀಧರ್, ಆರೋಗ್ಯ ಇಲಾಖೆಯ ಅಧಿಕಾರಿ ಮಂಜಯ್ಯ ಶೆಟ್ಟಿ, ವಲಯ ಆಯುಕ್ತ ಶಬರಿನಾಥ ರೈ ಭೇಟಿ ನೀಡಿ ಪೌರ ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು. ಅಲ್ಲದೆ, ಮಂಗಳವಾರ ಸಂಜೆ 5ಕ್ಕೆ ನಗರಪಾಲಿಕೆಯ ಅಧಿಕಾರಿಗಳು ಹಾಗೂ ಆಂಟನಿ ವೇಸ್ಟ್ ಕಂಪನಿಯ ಮುಖ್ಯಸ್ಥರು ಮತ್ತು ಸಂಘಟನೆಯ ಪ್ರಮುಖರೊಂದಿಗೆ ವಿಶೇಷ ಸಭೆ ನಡೆಸಿ ಕಾರ್ಮಿಕರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆಯನ್ನು ನೀಡಿದರು.