ಕಾಸರಗೋಡು, ಜ 09 ( DaijiworldNews/MS): ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿನಿ , ಪೆರುಂಬಳ ಬೇನೂರು ತಲಕ್ಲಾಯಿಯ ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿಯ ಸಾವಿನ ಘಟನೆಯೂ ಇದೀಗ ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದು , ಆತ್ಮಹತ್ಯೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು , ಅಂಜುಶ್ರೀಯವಳದೆನ್ನಲಾದ ಪತ್ರ ಹಾಗೂ ಮೊಬೈಲ್ ಫೋನ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ . ಈ ಹಿಂದೆ ವಿಷಾಹಾರ ಸೇವನೆಯಿಂದ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ಸಂಶಯ ಉಂಟಾಗಿದ್ದು , ಆದರೆ ಮರಣೋತ್ತರ ಪರೀಕ್ಷಾ ಪ್ರಾಥಮಿಕ ವರದಿಯಲ್ಲಿ ಸಾವಿಗೆ ವಿಷಾಹಾರ ಸೇವನೆ ಕಾರಣ ಅಲ್ಲ ಎಂಬ ಉಲ್ಲೇಖ ಮಾಡಿದ್ದು , ಇದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು . ಆದರೆ ವಿಷ ಸೇವನೆ ಮಾಡಿರುವುದು ಸಾವಿಗೆ ಕಾರಣ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಸುಳಿವು ನೀಡಿದ್ದರು. ಕರುಳಿನ ನಿಷ್ಕ್ರಿಯತೆ ಹಾಗೂ ಜಾಂಡಿಸ್ ನಿಂದ ಬಳಲುತ್ತಿದ್ದುದಾಗಿ ವರದಿಯಲ್ಲಿ ಉಲ್ಲೇಖಿಸಿದ್ದು , ಹೆಚ್ಚಿನ ಆಂತರಿಕ ಅವಯವಗಳನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ವರದಿ ಲಭಿಸಿದ ಬಳಿಕ ಸ್ಪಷ್ಟ ಮಾಹಿತಿ ಲಭಿಸಲಿದೆ. ಅಂಜುಶ್ರೀಯ ದೇಹದಲ್ಲಿ ವಿಷಾಂಶ ಪತ್ತೆಯಾಗಿದ್ದು ಆದರೆ ಆಹಾರದಲ್ಲಿದ್ದ ವಿಷದ ಅಂಶ ಅಲ್ಲ ಎಂದು ಫಾರೆನ್ಸಿಕ್ ತಜ್ಞರು ಅಭಿಪ್ರಾಯಪಟ್ಟಿದ್ದು , ಇದರಿಂದ ಸಂಶಯ ಉಂಟಾಗಿದ್ದು , ಈ ಪೊಲೀಸರು ತನಿಖೆ ಮುಂದುವರಿಸಿದ್ದಾರೆ .
ಡಿ . 31 ರಂದು ನಗರ ಹೊರವಲಯದ ಹೋಟೆಲೊಂದರಿಂದ 'ಕುಝಿಮಂದಿ ' ಮಾಂಸಾಹಾರ ಆರ್ಡರ್ ಮೂಲಕ ಮನೆಗೆ ತರಿಸಿದ್ದ ಅಂಜುಶ್ರೀ ರಾತ್ರಿ ಸೇವಿಸಿದ ಬಳಿಕ ಅಸ್ವಸ್ಥ ಗೊಂಡಿದ್ದರು . ಬಳಿಕ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು .
ಐದು ದಿನಗಳ ಬಳಿಕ ಸ್ಥಿತಿ ಗಂಭೀರವಾದುದರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ ಜನವರಿ 7 ರಂದು ಮೃತಪಟ್ಟಿದ್ದಳು. ಆಹಾರ ಖರೀದಿಸಿದ್ದ ಹೋಟೆಲ್ ನ ಪರವಾನಿಗೆಯನ್ನು ಆಹಾರ ಸುರಕ್ಷಾ ಇಲಾಖೆ ಅಧಿಕಾರಿಗಳು ರದ್ದುಗೊಳಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಮನೆಯಿಂದ ಲಭಿಸಿದ ಪತ್ರದಲ್ಲಿ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾಳೆನ್ನಲಾಗಿದೆ. ಆದರೆ ತನಿಖೆಯ ದೃಷ್ಟಿಯಿಂದ ಹೆಚ್ಚಿನ ಮಾಹಿತಿಗಳನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ .