ಉಡುಪಿ, ಜ 09 ( DaijiworldNews/MS): ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ವಿಭಾಗದ ವಾಲಿಬಾಲ್ ಕ್ರೀಡಾಕೂಟದ ವಿಜೇತರಾಗಿ ಕುರುಕ್ಷೇತ್ರ ವಿಶ್ವವಿದ್ಯಾಲಯ ಹೊರಹೊಮ್ಮಿದೆ. ಪೂರ್ಣಪ್ರಜ್ಞ ಕಾಲೇಜಿನ ವಿಬುಧೇಶ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಈ ಅಖಿಲ ಭಾರತ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಚೆನ್ನೈನ ಎಸ್.ಆರ್.ಎಂ. ವಿಶ್ವವಿದ್ಯಾಲಯ ದ್ವಿತೀಯ ಸ್ಥಾನ ಪಡೆದರೆ, ಕ್ಯಾಲಿಕಟ್ ವಿಶ್ವವಿದ್ಯಾಲಯ ತೃತೀಯ ಸ್ಥಾನ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ನಾಲ್ಕನೆಯ ಸ್ಥಾನ ಪಡೆಯಿತು.
ಕುರುಕ್ಷೇತ್ರದ ಕುರುಕ್ಷೇತ್ರ ವಿಶ್ವವಿದ್ಯಾಲಯದ ಸಾವನ್ ಪಂದ್ಯಾವಳಿಯ ಅತ್ಯುತ್ತಮ ಆಕ್ರಮಣಕಾರ ಪ್ರಶಸ್ತಿ ಮತ್ತು ಸಮೀರ್ ಪಂದ್ಯಾವಳಿಯ ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಚೆನ್ನೈನ SRM ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ಶ್ರೀಕಾಂತ್ ಪಂದ್ಯಾವಳಿಯ ಅತ್ಯುತ್ತಮ ಲಿಬೆರೊ ಮತ್ತು ಸೃಜನ್ ಶೆಟ್ಟಿ ಪಂದ್ಯಾವಳಿಯ ಅತ್ಯುತ್ತಮ ಬ್ಲಾಕರ್ ಆಗಿ ಹೊರಹೊಮ್ಮಿದ್ದಾರೆ. ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದ ಅರುಣ್ ಪಂದ್ಯಾವಳಿಯ ಅತ್ಯುತ್ತಮ ಸಾರ್ವತ್ರಿಕ ಆಟಗಾರ ಮತ್ತು ಕುರುಕ್ಷೇತ್ರ ವಿಶ್ವವಿದ್ಯಾಲಯದ ಸೂರ್ಯಾಂಶ್ ಪಂದ್ಯಾವಳಿಯ ಆಟಗಾರಾಗಿ ಹೊರ ಹೊಮ್ಮಿದ್ದಾರೆ.
ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠದ ಪೀಠಾಧೀಶರಾದ ಶ್ರೀ ಶ್ರಿ ಈಶಪ್ರಿಯತೀರ್ಥ ಸ್ವಾಮೀಜಿಯವರು ಉಪಸ್ಥಿತರಿದ್ದು ತಮ್ಮ ಅನುಗ್ರಹ ಸಂದೇಶದ ಮೂಲಕ ಕ್ರೀಡಾಳುಗಳನ್ನು ಅಭಿನಂದಿಸಿದರು. ಕರ್ನಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ.ಇ.ಓ. ಮಹಾಬಲೇಶ್ವರ ಭಟ್, ಉಡುಪಿಯ ಶಾಸಕರಾದ ಕೆ ರಘುಪತಿ ಭಟ್, ಕರ್ನಾಟಕ ಬ್ಯಾಂಕಿನ ಎ.ಜಿ.ಎಂ. ಆಗಿರುವ ರಾಜಗೋಪಾಲ್, ಗುರ್ಮೆ ಫೌಂಡೇಶನ್ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಯಾದ ಡಾ. ಜಿ.ಎಸ್. ಚಂದ್ರಶೇಖರ್, ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿ.ಎ. ಪ್ರಶಾಂತ್ ಹೊಳ್ಳ, ಅದಮಾರಿನ ಪೂರ್ಣಪ್ರಜ್ಞ ಸಂಸ್ಥೆಗಳ ಗೌರವ ಕೋಶಾಧಿಕಾರಿ ಸಿ.ಎ. ಗಣೇಶ್ ಹೆಬ್ಬಾರ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಜೆರಾಲ್ಡ್ ಸಂತೋಷ್ ಡಿಸೋಜ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಸುಕನ್ಯಾ ಮೇರಿ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಕ್ರೀಡಾಕೂಟದ ಸಂಯೋಜಕರಾದ ಸುಕುಮಾರ್ ಉಪಸ್ಥಿತರಿದ್ದರು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಅತ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಿಲಾಗುವುದು ಎಂದರು.
ಸಿ.ಎ. ಪ್ರಶಾಂತ ಹೊಳ್ಳ ಸ್ವಾಗತಿಸಿದರು, ಸುಕುಮಾರ್ ವಂದನಾರ್ಪಣೆ ಮಾಡಿದರು. ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು.