ಮಂಗಳೂರು, ಜ 09 ( DaijiworldNews/MS): ದುಡಿದು ತಿನ್ನುವ ಛಲ, ಸಾಧಿಸಲೇಬೇಕು ಎನ್ನುವ ಹಠ ಇದ್ದರೆ ಸಬಲ ನುಂಗಬಹುದು ಎನ್ನುವುದು ಹಿರಿಯರ ಮಾತು . ಈ ಮಾತನ್ನು ನಿಜ ಮಾಡಿ ತೋರಿಸಿದ್ದಾರೆ ಕೊಟ್ಟಾರ ಚೌಕಿಯ ಸುಭಾಷ್ ಕೆ. (40). ಬದುಕುವ ಹಠಕ್ಕೆ ಅಂಗವೈಕಲ್ಯ ಅಡ್ಢಿಯಾಗದೇ , ಯಾರಿಗೂ ಹೊರೆಯಾಗದೆ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡು ಸ್ವಾವಲಂಬನೆ ಜೀವನ ನಡೆಸುತ್ತಾ ತಮ್ಮ ಸುತ್ತಮುತ್ತದ ಹಲವರಿಗೆ ಸ್ಪೂರ್ತಿಯಾಗಿದ್ದಾರೆ ಸುಭಾಷ್.
ಸೌದಿ ಅರೇಬಿಯಾದಲ್ಲಿ ಆರು ವರ್ಷ ಕೆಲಸ ಮಾಡಿ ಭಾರತಕ್ಕೆ ಹಿಂತಿರುಗಿದ ಸುಭಾಷ್ ತಮ್ಮ ಗಳಿಕೆ ಹಣವನ್ನು ಟಿಪ್ಪರ್ ವ್ಯಾಪಾರಕ್ಕೆ ಹಾಕಿ ಭಾರಿ ನಷ್ಟವನ್ನು ಎದುರಿಸಿದರು. ಅದರೂ ಬದುಕು ಸಲೀಸಾಗಿ ಸಾಗುತ್ತಿತ್ತು. ಹೀಗಿರುವಾಗ ಸುಭಾಷ್ ಅವರ ಬದುಕಿನಲ್ಲಿ ಅವಘಡವೊಂದು ನಡೆದು ಮುಂದೆ ದಿಕ್ಕೆ ತೋಚದಂತಾಗಿತ್ತು. ಬೆನ್ನಿನ ನರಕ್ಕೆ ಪೆಟ್ಟು ಬಿದ್ದು ಸೊಂಟದ ಕೆಳಗೆ ಬಲವನ್ನೇ ಕಳೆದುಕೊಂಡು ನಡೆಯಲು ಸಾಧ್ಯವಾಗದಿದ್ದರೂ, ಛಲ ಬಿಡದೆ ಇಂದು ಇ-ಆಟೋ ಚಲಾಯಿಸಿ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಾರೆ.
ನಷ್ಟದ ಬಳಿಕ ಸುಭಾಷ್ ಲಾರಿ ಚಾಲಕರಾಗಿದುಡಿಯುತ್ತಿದ್ದರು. ೨೦೧೮ರ ಜೂನ್ ತಿಂಗಳ ಮಳೆಗಾಲದ ರಾತ್ರಿ ಹೊಸಪೇಟೆಯಿಂದ ಲೋಕಪುರಕ್ಕೆ ಮೈನ್ಸ್ ಹುಡಿ ಹೊಂದಿದ್ದ ಟ್ರೇಲರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕುಷ್ಟಗಿ ಬಳಿ ರಸ್ತೆ ಹಂಪ್ ಅರಿವಿಗೆ ಬಾರದೆ ಒಮ್ಮೆಲೆ ಹಾರಿ ಬಿದ್ದಿದ್ದು, ಬೆನ್ನಿನಲ್ಲಿ ತೀವ್ರತರದ ನೋವು ಉಂಟಾಗಿತ್ತು. ಆದರೂ ತಾವು ಚಲಾಯಿಸುತ್ತಿದ್ದ ಲಾರಿಯನ್ನು ನಿಲ್ಲಿಸಿ, ಹೆಚ್ಚಿನ ಅಪಘಾತವಾಗದಂತೆ ತಡೆದಿದ್ದರು. ಬಳಿಕ ಅಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬೆನ್ನಿನ ನರಕ್ಕೆ ಏಟುಬಿದ್ದ ಪರಿಣಾಮ ಸೊಂಟದ ಕೆಳಕ್ಕೆ ಬಲ ಇಲ್ಲದಂತಾಯಿತು. ಆಸ್ಪತ್ರೆ, ಚಿಕಿತ್ಸೆ ಎಂದು ಲಕ್ಷಾಂತರ ರೂಪಾಯಿ ಖರ್ಚಾಯಿತೇ ವಿನಃ ಯಾವುದೇ ಪ್ರಯೋಜನವಾಗಿಲ್ಲ. ಆ ಬಳಿಕ ಸುಮಾರು ಮೂರೂವರೆ ವರ್ಷ ಮನೆಯಲ್ಲಿ ಹಾಸಿಗೆಯಲ್ಲೇ ಇದ್ದ ಸುಭಾಷ್ ಅವರಿಗೆ ತಾಯಿ ಹೇಳಿದ ಒಂದು ಮಾತು ಇಂದು ಬದುಕನ್ನೇ ಬದಲಿಸಿತು. ಸ್ವಾವಲಂಬಿಯಾಗಿ ದುಡಿಯುವ ಉತ್ಸಾಹವನ್ನು ಮೂಡಿಸಿತು ಎನ್ನುತ್ತಾರೆ ಸುಭಾಷ್.
"ಹಾಸಿಗೆಯಲ್ಲೇ ಇದ್ದ ಸುಭಾಷ್ ಅವರನ್ನು ಕಂಡು ತಾಯಿ "ನನ್ನ ಬಳಿಕ ಯಾರು ನೋಡಿಕೊಳ್ಳುತ್ತಾರೆ? ನಾನು ಇರುವವರೆಗೆ ನಿನ್ನನ್ನು ನೋಡಿಕೊಳ್ಳುತ್ತೇನೆ. ಆ ಬಳಿಕ ಯಾರು ನೋಡುತ್ತಾರೆ" ಎನ್ನುವ ಅಮ್ಮ ಹೇಳಿದ ಮಾತು ಅಘಾತಕಾರಿಯೂ, ಹೃದಯ ಹಿಂಡುವಂತೆಯೂ ಇತ್ತು.
ಮಲಗಿದ ಸ್ಥಿತಿಯಲ್ಲಿಯೇ ಇದ್ದೇನೆ. ಮನೆಯಲ್ಲಿ ಅಣ್ಣ- ಅತ್ತಿಗೆ ಇದ್ದಾರೆ. ಹಾಸಿಗೆಯಿಂದ ಏಳುವುದರಿಂದ ಹಿಡಿದು ಪ್ರತಿಯೊಂದಕ್ಕೂ ಇನ್ನೊಬ್ಬರ ಸಹಾಯ ಬೇಕು. ಹಾಗಿರುವಾಗ ಮುಂದಿನ ಜೀವನ ಹೇಗೆ? ಎನ್ನುವ ಯೋಚನೆ ಬರಲು ಆರಂಭವಾಯಿತು. ಆದರೂ ಬದುಕಬೇಕು , ಸ್ವಾವಲಂಬಿಯಾಗಬೇಕು ಎನ್ನುವ ಹಠ ಮನದಲ್ಲಿ ಮೂಡಿತ್ತು.
ಇದಕ್ಕಾಗಿ ಮನೆಯಲ್ಲಿ ಚರ್ಚಿಸಿ ತಾಯಿ- ಅಣ್ಣನಲ್ಲಿ ಚರ್ಚಿಸಿ ಅವರ ನೆರವಿನಿಂದ ಸುಮಾರು ನಾಲ್ಕು ಲಕ್ಷ ರೂ. ಲೋನ್ ಮಾಡಿ ಇ-ಆಟೋ ಖರೀದಿಸಿದೆ. ಅದರಲ್ಲಿ ನನ್ನ ಅನುಕೂಲಕ್ಕೆ ಅನುಗುಣವಾಗಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಕಳೆದ ಏಳು ತಿಂಗಳಿಂದ ಚಾಲಕನಾಗಿ ದುಡಿಯುತ್ತಿದ್ದೇನೆ. ನಾನು ಆಟೋ ಓಡಿಸಿದಾಗ ಮನಸ್ಸಿಗೆ ಹಿತವಾಗುತ್ತದೆ. ನಾನು ಆಟೋ ಓಡಿಸುವಾಗ ಸೊಂಟದ ಕೆಳಗೆ ಯಾವುದೇ ಸಂವೇದನೆ ಇಲ್ಲ ಎಂಬ ಭಾವನೆ ಬರುವುದಿಲ್ಲ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 9 ರವರೆಗೆ ಚಾಲಕನಾಗಿ ದುಡಿಯುತ್ತೇನೆ. ರಾತ್ರಿ ವೇಳೆ ತುರ್ತು ಎಂದು ಯಾರಾದರೂ ಕರೆ ಮಾಡಿದರೂ ಹೋಗುತ್ತೇನೆ ಮನೆಗೆ ಹೋಗಿ ಕೆಳಗಿಳಿದಾಗ ಮಾತ್ರ ನನಗೆ ಸಂವೇದನೆ ಇಲ್ಲ ಎಂದು ಅನಿಸುತ್ತದೆ. ವೀಲ್ಚೇರ್ನಲ್ಲಿ ಆಟೋದಿಂದ ಇಳಿಯುವಾಗ, ಹತ್ತಲು ನನ್ನ ಅತ್ತಿಗೆ ನನಗೆ ಸಹಾಯ ಮಾಡುತ್ತಾರೆ ಎನ್ನುತ್ತಾರೆ ಸುಭಾಷ್ .