ಬಂಟ್ವಾಳ, ಜ 08 (DaijiworldNews/DB): ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಜನವರಿ 14ರಿಂದ 26ರವರೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಾದ್ಯಂತ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಾತ್ರೆಯಲ್ಲಿ ಬಳಸಿದ ವಾಹನ ಕಾಣಿಸಿಕೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಚುನಾವಣೆಯಲ್ಲಿ ಪ್ರಚಾರಕ್ಕೆ ಯಾತ್ರೆಯ ಸಂದರ್ಭದಲ್ಲಿ ಬಳಸಿಕೊಂಡಿದ್ದ ಇಸ್ಸುಜು ಕಂಪೆನಿಯ ಬಾರೀ ಮೊತ್ತದ ಕಾರು ಈ ಯಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ. ಕಾರಿನಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಸಹಿತ ಬಿಜೆಪಿ ಪ್ರಮುಖರ ಭಾವಚಿತ್ರವನ್ನು ಹಾಕಲಾಗಿದೆ. ಕೆಲವು ಬದಲಾವಣೆಗಳು ಆಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾತ್ರಿ ವೇಳೆ ಬಹಿರಂಗ ಸಭೆ ನಡೆಸಲು ಧ್ವನಿವರ್ಧಕ ಸಹಿತ ಪೂರಕವಾದ ಸಕಲ ವ್ಯವಸ್ಥೆ ಗಳನ್ನು ಈ ವಾಹನ ಹೊಂದಿದೆ.
ಜನವರಿ 14ರಿಂದ ನಡೆಯುವ ಯಾತ್ರೆಯಲ್ಲಿ ಈ ವಾಹನ ಕಾಣಿಸಿಕೊಳ್ಳುವ ಮೂಲಕ ವಿಶೇಷ ಅಕರ್ಷಣೆ ನೀಡಲಿದೆ. ಪಾದಯಾತ್ರೆ ಆರಂಭಿಕ ಹಂತದಲ್ಲಿ ಅಂದರೆ ಜ.14ರಿಂದ 20ರವರೆಗೆ ಈ ವಾಹನ ಪಾಲ್ಗೊಂಡು ಬಳಿಕ ವಾಪಾಸು ತೆರಳಲಿದೆ. ಆನಂತರ ಬಂಟ್ವಾಳ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಹೊಸ ಕಾರೊಂದನ್ನು ವಿನ್ಯಾಸಗೊಳಿಸಿ ತರಿಸಲಾಗುತ್ತಿದೆ. ಆ ಕಾರು ಜ. 21ರಿಂದ 26 ರವರೆಗೆ ಯಾತ್ರೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಬಂಟ್ವಾಳ ಕ್ಷೇತ್ರದಲ್ಲಿ ನಡೆಯುವ 3ನೇ ಪಾದಯಾತ್ರೆ ಇದಾಗಿದ್ದು, ಈ ಹಿಂದೆ ಶಾಸಕರಾಗುವ ಮೊದಲು 2 ಪಾದಯಾತ್ರೆಗಳನ್ನು ನಡೆಸಿದ್ದರು.
ಪಾದಯಾತ್ರೆ ಸಾಗುವ ಹಾದಿ
ಜನವರಿ 14ರಂದು ಮಧ್ಯಾಹ್ನ 2ಕ್ಕೆ ಪೊಳಲಿ ಕ್ಷೇತ್ರದಿಂದ ತೆಂಕಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನಕ್ಕೆ ಕರಿಯಂಗಳ, ತೆಂಕಬೆಳ್ಳೂರು ಗ್ರಾಮಗಳ ಮೂಲಕ ಪಾದಯಾತ್ರೆ ಸಾಗಲಿದೆ. ಜ. 15ರಂದು ನಂದಾವರ ಕ್ಷೇತ್ರದಿಂದ ವಿಟ್ಲಪಡ್ನೂರು ಕಾಪುಮಜಲು ಶ್ರೀ ಮಲರಾಯ ದೈವಸ್ಥಾನಕ್ಕೆ ಸಜೀಪಮುನ್ನೂರು, ಸಜೀಪಮೂಡ, ಮಂಚಿ, ಸಾಲೆತ್ತೂರು, ಕೊಳ್ನಾಡು, ವಿಟ್ಲಪಡ್ನೂರು ಗ್ರಾಮಗಳು, ಜ. 16ರಂದು ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದಿಂದ ಕರೋಪಾಡಿ ಮಿತ್ತನಡ್ಕ ಶ್ರೀ ಮಲರಾಯ ಪಿಲಿಚಾಮುಂಡಿ ದೈವಸ್ಥಾನಕ್ಕೆ ಕನ್ಯಾನ, ಕರೋಪಾಡಿ ಗ್ರಾಮಗಳ ಮೂಲಕ ಸಾಗಲಿದೆ.
ಜ. 17ರಂದು ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದಿಂದ ಪೆರಾಜೆ ಸಾದಿಕುಕ್ಕು ಶ್ರೀ ಗುಡ್ಡೆ ಚಾಮುಂಡಿ ದೈವಸ್ಥಾನಕ್ಕೆ ವೀರಕಂಭ, ಅನಂತಾಡಿ, ನೆಟ್ಲಮುಡ್ನೂರು, ಮಾಣಿ, ಪೆರಾಜೆ, ಜ. 18ರಂದು ಕಡೇಶ್ವಾಲ್ಯ ದೇವಸ್ಥಾನದಿಂದ ಕಲ್ಲಡ್ಕ ಶ್ರೀರಾಮ ಮಂದಿರಕ್ಕೆ ಕಡೇಶ್ವಾಲ್ಯ, ಬರಿಮಾರು, ಗೋಳ್ತಮಜಲು ಗ್ರಾಮಗಳು, ಜ. 19ರಂದು ಅಮ್ಟೂರು ಕೇಶವನಗರ ಶ್ರೀ ಶಾರದಾ ಮಂದಿರದಿಂದ ನೀರಪಾದೆ ಶ್ರೀ ಕುಂದಾಯ ರಕ್ತೇಶ್ವರೀ ಮಹಮ್ಮಾಯಿ ದೇವಸ್ಥಾನಕ್ಕೆ ಅಮ್ಟೂರು, ಪಾಣೆ ಮಂಗಳೂರು, ನರಿಕೊಂಬು, ಶಂಭೂರು, ಬಾಳ್ತಿಲ ಗ್ರಾಮಗಳು, ಜ. 2೦ರಂದು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನಕ್ಕೆ ಬಂಟ್ವಾಳ ಕಸ್ಬಾ, ನಾವೂರು, ದೇವಶ್ಯಪಡೂರು, ದೇವಶ್ಯಮೂಡೂರು, ಸರಪಾಡಿ ಗ್ರಾಮಗಳಿಗೆ ಸಾಗಲಿದೆ.
ಜ. 21ರಂದು ಇಳಿಯೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಪಾಂಡವರಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ಮಣಿನಾಲ್ಕೂರು, ಉಳಿ, ತೆಂಕಕಜೆಕಾರು ಗ್ರಾಮಗಳು, ಜ. 22ರಂದು ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಸಿದ್ದಕಟ್ಟೆ ಶ್ರೀ ನಾರಾಯಣ ಗುರು ಮಂದಿರಕ್ಕೆ ಪಿಲಾತಬೆಟ್ಟು, ಇರ್ವತ್ತೂರು, ಮೂಡುಪಡುಕೋಡಿ, ಕೊಡಂಬೆಟ್ಟು, ಪಿಲಿಮೊಗರು, ಅಜ್ಜಿಬೆಟ್ಟು, ಚೆನ್ನೈತ್ತೋಡಿ, ಕುಕ್ಕಿಪಾಡಿ, ಎಲಿಯನಡುಗೋಡು, ಸಂಗಬೆಟ್ಟು ಗ್ರಾಮಗಳು, ಜ. 23ರಂದು ಕಾರಿಂಜ ಕ್ಷೇತ್ರದಿಂದ ರಾಯಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಕಾವಳಮೂಡೂರು, ಕಾವಳಪಡೂರು, ಕಾಡಬೆಟ್ಟು, ಮೂಡನಡುಗೋಡು, ಬುಡೋಳಿ, ಪಂಜಿಕಲ್ಲು, ಕೊಯಿಲ, ರಾಯಿ ಗ್ರಾಮಗಳು, ಜ. 24ರಂದು ಕರ್ಪೆ ಶ್ರೀ ಕುಪ್ಪೆಟ್ಟು ಬರ್ಕೆ ಪಂಜುರ್ಲಿ ಮೂಲಸ್ಥಾನದಿಂದ ಕುರಿಯಾಳ ದುರ್ಗಾನಗರ ಶ್ರೀ ಓಂಕಾರೇಶ್ವರೀ ಭಜನಾ ಮಂದಿರಕ್ಕೆ ಕರ್ಪೆ, ಅರಳ, ಬಡಗಬೆಳ್ಳೂರು, ಕುರಿಯಾಳ ಗ್ರಾಮಗಳು, ಜ. 25ರಂದು ಮಂಗ್ಲಿಮಾರ್ ದೈವಸ್ಥಾನದಿಂದ ದೇವಂಬೆಟ್ಟು ದೇವಸ್ಥಾನಕ್ಕೆಅಮ್ಟಾಡಿ, ಅಮ್ಮುಂಜೆ, ಕಳ್ಳಿಗೆ ಗ್ರಾಮಗಳಿಗೆ ಸಾಗಲಿದೆ. ಜ. 26ರಂದು ಮಧ್ಯಾಹ್ನ 2ಕ್ಕೆ ಬಿ.ಸಿ.ರೋಡಿನ ಕೈಕಂಬದಿಂದ ಹೊರಟು ಬಿ.ಸಿ.ರೋಡಿನಲ್ಲಿ ಸಮಾರೋಪ ನೆರವೇರಲಿದೆ.