ಬಂಟ್ವಾಳ, ಜ 08 (DaijiworldNews/DB): ಪುಣಚ ಗ್ರಾಮದ ಮಣಿಲದಲ್ಲಿ ಬಾಲಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಮಣಿಲ ರವೀಂದ್ರ ಗೌಡರ ಪುತ್ರ ಹೇಮಂತ್ ಆತ್ಮಹತ್ಯೆಗೈದ ಬಾಲಕ. ಪುಣಚ ದೇವಿನಗರ ಶ್ರೀ ದೇವಿ ವಿದ್ಯಾಕೇಂದ್ರದ ಪ್ರೌಢಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಮನೆ ಮಂದಿಯೆಲ್ಲ ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳು ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಹಳೆಯ ಲಂಗವನ್ನು ನೇಣು ಹಗ್ಗದಂತೆ ತಯಾರಿಸಿಕೊಂಡು ಗೋಡೆಗೆ ಬಡಿದಿದ್ದ ಕಬ್ಬಿಣದ ರಾಡ್ಗೆ ಕುಣಿಕೆ ಹಾಕಿಕೊಂಡಿದ್ದಾನೆ.
ತರಗತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಈತ ಬೆಳಗ್ಗೆ ಧನು ಪೂಜೆಗೆ ಹೋಗಿ ಬಂದಿದ್ದು, ನಾಳೆ ಪರೀಕ್ಷೆ ಇರುವ ಕಾರಣ ಓದಲಿದ್ದು ದೇವಸ್ಥಾನಕ್ಕೆ ಬರುವುದಿಲ್ಲ ಎಂದು ಮನೆಯಲ್ಲಿಯೇ ಉಳಿದಿದ್ದ ಎನ್ನಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821