ಮಂಗಳೂರು, ಜ 08 ( DaijiworldNews/MS): ದೇಶದ ಕರಾವಳಿ ತೀರದ ಭದ್ರತೆ ದೃಷ್ಟಿಯಿಂದ ಉಡುಪಿಯ ಕುಂದಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಯ ಬೇಲೇಕೇರಿಯಲ್ಲಿ ರಾಡಾರ್ ಅಳವಡಿಸಲಾಗುವುದು ಎಂದು ಕರಾವಳಿ ಕಾವಲು ಪಡೆ ಜಿಲ್ಲೆ ನಂ. 3ರ ಕರ್ನಾಟಕ ಕಮಾಂಡರ್ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ ಹೇಳಿದರು.
ಭಾರತೀಯ ಕೋಸ್ಟ್ಗಾರ್ಡ್ ಜ.೦೮ ರಂದು ಪಣಂಬೂರಿನಲ್ಲಿ ಆಯೋಜಿಸಿದ್ದ ಮೀನುಗಾರರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸುರತ್ಕಲ್ ಮತ್ತು ಭಟ್ಕಳದ ರಾಡಾರ್ ಕೇಂದ್ರಗಳ ಸಹಾಯದಿಂದ ಕರ್ನಾಟಕದ ಸಂಪೂರ್ಣ 320 ಕಿ.ಮೀ. ಉದ್ದದ ಕರಾವಳಿಯನ್ನು ಕಣ್ಗಾವಲು ಮಾಡಲಾಗುತ್ತಿದೆ
ಬೇಲೇಕೇರಿಯಲ್ಲಿ ರಾಡಾರ್ ಕೇಂದ್ರ ಬಹುತೇಕ ಸಿದ್ಧವಾಗಿದ್ದು, ಕುಂದಾಪುರದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಪ್ರತೀ ರಾಡಾರ್ ಕೇಂದ್ರವು ಸಮುದ್ರದೊಳಗೆ 30 ನಾಟಿಕಲ್ ಮೈಲುಗಳವರೆಗೆ ಕ್ರಮಿಸುತ್ತದೆ. ರಾಡಾರ್ನಲ್ಲಿರುವ ಕ್ಯಾಮೆರಾ ಐದರಿಂದ ಏಳು ನಾಟಿಕಲ್ ಮೈಲುಗಳನ್ನು ಕ್ರಮಿಸುತ್ತದೆ. ಮುಂಬಯಿ ಭಯೋತ್ಪಾದನ ದಾಳಿಯ ಅನಂತರ ಕರಾವಳಿ ಕಣ್ಗಾವಲು ಜಾಲದ ಅಡಿಯಲ್ಲಿ ರಾಡಾರ್ ಕೇಂದ್ರಗಳನ್ನು ಸ್ಥಾಪಿಸಲಾಯಿತು ಎಂದು ಮಾಹಿತಿ ನೀಡಿದರು.