ಮಂಗಳೂರು,ಮಾ 09(MSP): ದೇಶವಿರಲಿ, ರಾಜ್ಯವಿರಲಿ ಸದೃಢ ಸರ್ಕಾರ ಬೇಕು. ಆದರೆ ಕರ್ನಾಟಕದಲ್ಲಿ ಅವಕಾಶವಾದಿ ಮೈತ್ರಿ ಅಸ್ಥಿರ ಸರ್ಕಾರವಿದ್ದು ಇದರಿಂದ ಜನರಿಗೆ ಉಪಯುಕ್ತವಾಗದು. ಕುರ್ಚಿಗಾಗಿ ಕಿತ್ತಾಡುವ ಸರ್ಕಾರ ಯಾವಾಗಲಾದರೂ ಉರುಳಬಹುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಾ.9 ರ ಶನಿವಾರ ಮಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ರೈತರ ಮಾಹಿತಿಯನ್ನೂ ರಾಜ್ಯ ಸರ್ಕಾರ ಇನ್ನು ಕೇಂದ್ರ ಸರ್ಕಾರಕ್ಕೆ ನೀಡಿಲ್ಲ. ಹಲವು ರಾಜ್ಯಗಳ ಫಲಾನುಭವಿ ರೈತರು ಈಗಾಗಲೇ ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ .ಫಲಾನುಭವಿಗಳ ಖಾತೆಗೆ ಕೇಂದ್ರ 6 ಸಾವಿರ ಜಮೆ ಮಾಡಿದೆ. ಕರ್ನಾಟಕದ ಮೈತ್ರಿ ಸರ್ಕಾರದ ಕೆಲಸ ಮಾತಿನಲ್ಲಿದ್ದರೆ ಸಾಲದು ಕೃತಿಗೆ ಬರಬೇಕು. ತಕ್ಷಣ ಕರ್ನಾಟಕದ ರೈತರ ಫಲಾನುಭವಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ತತ್ ಕ್ಷಣವೇ ಕಳುಹಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಭರವಸೆಗಳನ್ನು ನೀಡುವುದು ಮತ್ತು ಅದನ್ನು ಮರೆಯುವುದು ಕಾಂಗ್ರೆಸ್ ಗುಣ. ಕರ್ನಾಟಕದಲ್ಲಿ ವಿಪಕ್ಷಗಳು ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಿಲ್ಲ. ಬಡತನ, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಭರವಸೆ ನೀಡುತ್ತಾ ಬಂದಿದ್ದಾರೆ. ಆದರೆ, ಕಾರ್ಯರೂಪಕ್ಕೆ ಏನನ್ನು ತಂದಿಲ್ಲ. ಈ ಹಿಂದೆ ಸ್ವತಃ ರಾಜೀವ ಗಾಂಧಿಯವರೇ ಕೇಂದ್ರ ಸರ್ಕಾರ 1 ರೂಪಾಯಿ ನೀಡಿದರೆ ಅದು ಫಲಾನುಭವಿಗೆ 15 ಪೈಸೆ ಮಾತ್ರ ದೊರಕುತ್ತದೆ ಎಂದು ಹೇಳಿದ್ದರು. ಇದು ಕಾಂಗ್ರೆಸ್ನ ಆಡಳಿತ ವೈಖರಿ. ಆದರೆ ಕೇಂದ್ರದಲ್ಲಿ ಎನ್ ಡಿ ಎ ಸರ್ಕಾರ ಅಡಳಿತಕ್ಕೆ ಬಂದ ಬಳಿಕ ಭ್ರಷ್ಟಾಚಾರಿಗಳಿಗೆ ನಡುಕ ಉಂಟಾಗಿದೆ. ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ಇದರಿಂದ ಕಳ್ಳರ ಪಾಲಾಗುತ್ತಿದ್ದ 1.10 ಲಕ್ಷ ಕೋಟಿ ಉಳಿತಾಯ ಮಾಡಲಾಗಿದೆ ಎಂದರು.