ಕಾರ್ಕಳ, ಜ 07 (DaijiworldNews/DB): ಭಾರತೀಯ ವೈದ್ಯಕೀಯ ಸಂಘದ 2021 - 2022ನೇ ಸಾಲಿನ ರಾಜ್ಯಾಧ್ಯಕ್ಷರಾಗಿದ್ದ ಕಾರ್ಕಳದ ಡಾ . ಸುರೇಶ್ ಕುಡ್ವ ಅವರು 2021-22ನೇ ಸಾಲಿನ ರಾಷ್ಟ್ರದ ಅತ್ಯುತ್ತಮ ರಾಜ್ಯಾಧ್ಯಕ್ಷ ಪ್ರಶಸ್ತಿಯನ್ನು ಪಡೆದಿದ್ದಾರೆ.
ಐಎಂಎ ರಾಷ್ಟ್ರಾಧ್ಯಕ್ಷ ಡಾ. ಸಹಜಾನಂದ ಪ್ರಸಾದ ಸಿಂಗ್ ಅವರು ಪ್ರಯಾಗ್ ರಾಜ್ನಲ್ಲಿ ಜರುಗಿದ ರಾಷ್ಟ್ರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಕಟೀಲಿನಲ್ಲಿ ಜನಿಸಿ, ಶ್ರೀ ದುರ್ಗಾ ಪರಮೇಶ್ವರಿ ದೇವಳ ವಿದ್ಯಾ ಸಂಸ್ಥೆಗಳಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣ ಪಡೆದ ಅವರು, ಪಿಯುಸಿ ವ್ಯಾಸಂಗವನ್ನು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಮುಗಿಸಿದರು. ಎಂಬಿಬಿಎಸ್ ಪದವಿಯನ್ನು ಮಣಿಪಾಲದ ಕೆಎಂಸಿಯಲ್ಲಿ 2ನೇ ರ್ಯಾಂಕ್ ನೊಂದಿಗೆ ಹಾಗೂ ಎಚಿಡಿ (ಪದವಿ) ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದರು.
ಕಳೆದ 40 ವರ್ಷಗಳಿಂದ ಕಾರ್ಕಳದಲ್ಲಿ ಮಕ್ಕಳ ತಜ್ಞರಾಗಿ ಜನಪ್ರಿಯರಾಗಿರುವ ಡಾ. ಕುಡ್ವ ಅವರು ಜೇಸಿ, ರೋಟರಿ ಹಾಗೂ ರೆಡ್ ಕ್ರಾಸ್ ಮತ್ತು ಐಎಂಎಯ ಸ್ಥಾಪಕ ಕಾರ್ಯದರ್ಶಿಗಳಾಗಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ.
1988ರಲ್ಲಿ ಅಂತಾರಾಷ್ಟ್ರೀಯ ರೋಟರಿ ಗವರ್ನರ್ ಪ್ರಶಸ್ತಿ, 1998ರಲ್ಲಿ ಅತ್ಯುತ್ತಮ ಜೇಸಿ ಪ್ರಶಸ್ತಿ, ಐಎಂಎಯಲ್ಲಿ 1991ರಲ್ಲಿ ರಾಷ್ಟ್ರದಲ್ಲಿಯೇ ಉತ್ತಮ ಘಟಕ ಪ್ರಶಸ್ತಿ, 2004ರಿಂದ 2007ರವreಗೆ ಪ್ರತೀ ವರ್ಷ ರಾಜ್ಯಾಧ್ಯಕ್ಷರ ಪ್ರಶಸ್ತಿ, 2019ರಲ್ಲಿ ಡಾಕ್ಟರ್ ಬಿ.ಸಿ. ರಾಯ್ ರಾಜ್ಯ ಪ್ರಶಸ್ತಿ, 2008ರಲ್ಲಿ ಐಎಂಎ ದೆಹಲಿ ಅತ್ಯುತ್ತಮ ವೈದ್ಯ ಪ್ರಶಸ್ತಿ, ಪಡೆದಿದ್ದರು. ಡಾ.ಟಿಎಂಎ ಪೈಯವರ ನಂತರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 2ನೇ ಕರ್ನಾಟಕ ರಾಜ್ಯದ ಐಎಂಎ ಅಧ್ಯಕ್ಷರಾದ ಇವರ ಮುಂದಾಳತ್ವದಲ್ಲಿ ಇತ್ತೀಚೆಗೆ ಅಕ್ಟೋಬರ್ 28, 29 ರಂದು ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ಸಭಾಭವನದಲ್ಲಿ ಐಎಂಎ ರಾಜ್ಯ ಸಮ್ಮೇಳನ ಸಂಘಟಿಸಿದ್ದರು.