ಕಾರ್ಕಳ, ಜ 07 (DaijiworldNews/DB): ರಸ್ತೆಯಲ್ಲಿ ತೂರಾಡುತ್ತಿದ್ದ ಕುಡುಕನೊಬ್ಬನಿಗೆ ಜಾಗೃತಿ ಮೂಡಿಸಿದ ಕಳ್ಳನೊಬ್ಬ ತನ್ನ ಚಾಕಚಕ್ಯತೆ ತೋರಿಸಿ ಚಿನ್ನಾಭರಣ, ನಗದು ಎಗರಿಸಿಕೊಂಡು ಹೋಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.
ರೆಂಜಾಳ ಕಡಂಬಾಕ್ಯಾರ್ ನಿವಾಸಿ ಸುಧಾಕರ ಶೆಟ್ಟಿ, (60) ಅವರು ತಮ್ಮ ಚಿನ್ನಾಭರಣ, ನಗದು ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ಬೇಕರಿ ವ್ಯವಹಾರ ಮಾಡಿಕೊಂಡಿದ್ದ ಇವರು ಜನವರಿ 4ರಂದು ಬೆಂಗಳೂರಿನಿಂದ ಪೂಜಾ ಕಾರ್ಯಕ್ರಮಕ್ಕೆಂದು ಊರಿಗೆ ಹಿಂತಿರುಗಿದ್ದರು. ಜನವರಿ 5ರ ರಾತ್ರಿ 8 ಗಂಟೆಗೆ ಬೆಂಗಳೂರಿಗೆಂದು ಮನೆಯಿಂದ ಹೊರೆಟಿದ್ದ ಅವರು ಕಿಂಗ್ ಬಾರ್ನಲ್ಲಿ ಮದ್ಯ ಸೇವನೆ ಮಾಡಿ ಹೊರಟು ರಸ್ತೆಗೆ ಬಂದಿದ್ದಾರೆ. ಅಲ್ಲಿಂದ ಬಸ್ ನಿಲ್ದಾಣ ಕಡೆಗೆ ಹೆಜ್ಜೆ ಹಾಕುತ್ತಾ ಸಾಗಿದರೆ ಅದೇ ಸಮಯದಲ್ಲಿ ವ್ಯಕ್ತಿಯೊಬ್ಬ ಸನ್ನಿಹಕ್ಕೆ ಬಂದು ಎಲ್ಲಿಗೆ ಹೊರಟಿದ್ದೀರಿ ಎಂದು ಪ್ರಶ್ನಿಸಿ, ಬಸ್ ನಿಲ್ದಾಣದವರೆಗೆ ಬಿಡುತ್ತೇನೆಂದು ನಂಬಿಸಿದ್ದಾನೆ.
ಅಲ್ಲದೆ, ಬೇರೆ ಯಾರಾದರು ನೋಡಿದರೆ ನಿಮ್ಮ ಚಿನ್ನ ಹಾಗೂ ಹಣವನ್ನು ತೆಗೆದುಕೊಳ್ಳುತ್ತಾರೆ. ಅದನ್ನು ಜಾಗೃತೆಯಾಗಿ ಚೀಲದಲ್ಲಿ ಇಟ್ಟುಕೊಳ್ಳಿ ಎಂದು ಕಿವಿಮಾತು ಹೇಳಿದ್ದಾನೆ.
ನಶೆಯಿಂದ ಮುಕ್ತಿ ಹೊಂದಿದಾಗ ಸುಧಾಕರ ಶೆಟ್ಟಿ ಅವರಲ್ಲಿದ್ದ ಇದ್ದ 40 ಗ್ರಾಂ ತೂಕದ ಚಿನ್ನದ ಮೆಂತೆ ಚೈನ್, 1 ಉಂಗುರ ಮತ್ತು ನವರತ್ನ ಉಂಗುರ ಹಾಗೂ ಕಿಸೆಯಲ್ಲಿದ್ದ 1500 ರೂ. ನಗದು ಹಾಗೂ 1 ಮೊಬೈಲ್ನ್ನು ಕಳ್ಳ ಕದ್ದೊಯ್ದಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.