ಉಳ್ಳಾಲ, ಜ 07 (DaijiworldNews/DB): ಎನ್ಐಎ ವಶಕ್ಕೆ ಪಡೆದುಕೊಂಡಿರುವ ವಿದ್ಯಾರ್ಥಿ ರೇಶಾನ್ ಶೇಖ್ ತಂದೆ ಜೊತೆಗೆ ಯು.ಟಿ. ಖಾದರ್ ಇರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಲು ಬಿಟ್ಟು ಬಿಜೆಪಿಗರು ಫೋಟೊ ರಾಜಕೀಯ ಮಾಡುತ್ತಿದ್ದಾರೆ. ಲಿಂಕ್ ಕಲ್ಪಿಸಿ ಅಪಪಪ್ರಚಾರ ನಡೆಸುವುದು ಬಿಜೆಪಿಗರ ಜಾಯಮಾನ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ್ ಉಳ್ಳಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುವಾಗ ಇದೊಂದು ಹೆಸರು ಕೆಡಿಸುವ ಪ್ರಯತ್ನ. ಎನ್ಐಎ ನಿಷ್ಪಕ್ಷಪಾತ ತನಿಖೆ ನಡೆಸಲಿ. ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ. ಆದರೆ ಯು.ಟಿ. ಖಾದರ್ ಹಾಗೂ ವಿದ್ಯಾರ್ಥಿಯ ತಂದೆಗೆ ಯಾವುದೇ ಸಂಬಂಧವಿಲ್ಲ ಎಂದರು.
ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ಎಲ್ಲರೂ ಜೊತೆಗೆ ಫೋಟೊ ಕ್ಲಿಕ್ಕಿಸುವುದು ಸಹಜ. ಚುನಾವಣೆ ಸಮೀಪಿಸುವಾಗ ಎಲ್ಲದಕ್ಕೂ ಲಿಂಕ್ ಕಲ್ಪಿಸುವುದು ಬಿಜೆಪಿಯವರ ಜಾಯಮಾನ. ಬಿಜೆಪಿ ನಾಯಕರುಗಳು ಕಂತೆ ಕಂತೆ ಖೋಟಾ ನೋಟುಗಳನ್ನು ಹರಡುವ ಆರೋಪಿಗಳ ಜೊತೆಗೆ ಇರುವ ಫೋಟೊ ಹರಿದಾಡಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.
ಉಡುಪಿ ಶಾಸಕ ರಘುಪತಿ ಭಟ್ ಎನ್ಐಎ ಅಧಿಕಾರಿಯಾಗುವುದು ಬೇಡ. ನಿಷ್ಪಕ್ಷಪಾತ ತನಿಖೆ ನಡೆದು ಅಧಿಕಾರಿಗಳೇ ಮಾಹಿತಿ ನೀಡಲಿದ್ದಾರೆ. ಖುದ್ದು ಭಟ್ ಹಗರಣದಲ್ಲಿ ಸಿಕ್ಕಿಕೊಂಡಿರುವ ಸಾಕ್ಷಿಯಿದ್ದರೂ ಒಪ್ಪುತ್ತಿಲ್ಲ. ರಘುಪತಿ ಭಟ್ ಹಿಂದಿನ ಪುರಾಣವನ್ನು ಮೇಲಕ್ಕೆತ್ತಲು ಕಾಂಗ್ರೆಸ್ಗೆ ಗೊತ್ತಿದೆ. ಜನಮೆಚ್ಚಿದ ಶಾಸಕ ಯು.ಟಿ. ಖಾದರ್ ಜೊತೆಗೆ ಎನ್ಐಎ ವಶದಲ್ಲಿರುವ ವಿದ್ಯಾರ್ಥಿಯ ತಂದೆಯ ಜತೆಗೆ ಫೋಟೊ ವೈರಲ್ ಮಾಡಿ ರಾಜಕೀಯ ಮಾಡುವುದನ್ನು ಕಾಂಗ್ರೆಸ್ ಉಳ್ಳಾಲ ಬ್ಳಾಕ್ ಖಂಡಿಸುತ್ತದೆ ಎಂದವರು ತಿಳಿಸಿದರು.
ಬ್ಲಾಕ್ ಉಪಾಧ್ಯಕ್ಷ ದಿನೇಶ್ ರೈ ಮಾತನಾಡಿ, ಭಯೋತ್ಪಾದನೆ, ಭಯೋತ್ಪಾದಕರನ್ನು ಬೆಂಬಲಿಸುವುದನ್ನು ಕಾಂಗ್ರೆಸ್ ಸದಾ ಖಂಡಿಸುತ್ತದೆ. ಬಿಜೆಪಿಯವರು ಚುನಾವಣಾ ಅಸ್ತ್ರವನ್ನಾಗಿ ಫೋಟೊ ಹಿಡಿದುಕೊಂಡು ರಾಜಕೀಯ ಮಾಡುವುದಕ್ಕೆ ನಮ್ಮ ವಿರೋಧವಿದೆ. ಸಚಿವ ಈಶ್ವರಪ್ಪ ಜೊತೆಗೆ ಕೊಲೆ ಆರೋಪಿಯ ಭಾವಚಿತ್ರವೂ ಇದೆ. ಸಿ.ಟಿ. ರವಿ ಜೊತೆಗೆ ಮೂವರು ಕೊಲೆ ಆರೋಪಿಗಳ ಫೋಟೊ ಪ್ರಚಾರಕ್ಕೆ ಬಂದಿದೆ. ಇದರ ಬಗ್ಗೆ ಮಾತಾಡದ ಬಿಜೆಪಿಯವರು ಕೇವಲ ಯು.ಟಿ. ಖಾದರ್ ಕುರಿತು ಮಾತನಾಡುತ್ತಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್ ಗೆ ಪತ್ನಿ ಆತ್ಮಹತ್ಯೆ ಪ್ರಕರಣದಲ್ಲಿ ಮಂಪರು ಪರೀಕ್ಷೆ ಮಾಡಿದಲ್ಲಿ ಅವರು ಆರೋಪಿಯೇ. ಅತುಲ್ ನನ್ನು ಬಳಸಿ ಕೊಲೆ ನಡೆಸಿ ಅಧಿಕಾರದಿಂದ ಪ್ರಕರಣವನ್ನು ಆತ್ಮಹತ್ಯೆಗೆ ತಿರುಗಿಸಿರುವುದು ಎಲ್ಲರಿಗೂ ಗೊತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಕುಂಪಲ ಮಾತನಾಡಿ, ಮಾಂಸ ದಂಧೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟ್ರೋ ರವಿ, ಆಪರೇಷನ್ ಕಮಲ ನಡೆಸುವಾಗಲೂ ಮುಂಬೈಗೆ 13 ಶಾಸಕರನ್ನು ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈ ಕುರಿತು ಕುಮಾರಸ್ವಾಮಿ ಸಿ.ಡಿಯನ್ನೂ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಗೃಹಮಂತ್ರಿಯ ಜೊತೆಗೆ ಸ್ಯಾಂಟ್ರೋ ರವಿ ಇರುವ ಭಾವಚಿತ್ರ ಹರಿದಾಡುತ್ತಿದೆ. ಇಂತಹ ನೈತಿಕತೆ ಇಲ್ಲದ ಬಿಜೆಪಿಯವರು ಶಾಸಕ ಯು.ಟಿ. ಖಾದರ್ ಕುರಿತು ಅಪಪ್ರಚಾರ ನಡೆಸಲು ಯೋಗ್ಯತೆಯಿಲ್ಲ ಎಂದರು.
ಕಾಂಗ್ರೆಸ್ ಮಂಗಳೂರು ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಅಧ್ಯಕ್ಷ ದೀಪಕ್ ಪಿಲಾರ್, ಇಂಟಕ್ನ ವಿಶಾಲ್ ಕಾಸಿಂಬೆಟ್ಟು, ಕಾರ್ಯದರ್ಶಿ ಮನ್ಸೂರ್, ಸೋಮೇಶ್ವರ ನಗರಸಭೆ ಮಾಜಿ ಸದಸ್ಯ ಪುರುಷೋತ್ತಮ್ ಪಿಲಾರ್ ಉಪಸ್ಥಿತರಿದ್ದರು.