ಕುಂದಾಪುರ, ಜ 07 (DaijiworldNews/DB): ಜಿಲ್ಲಾ ಉಸ್ತುವಾರಿ ಸಚಿವರ ಭರವಸೆಯ ಹೊರತಾಗಿಯೂ ಸೀಮೆಎಣ್ಣೆ ವಿತರಣೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾಂಪ್ರದಾಯಿಕ ಮೀನುಗಾರರು ಮುಂದಿನ 20 ದಿನದೊಳಗೆ 7000 ಕೆ.ಎಲ್ ಸೀಮೆಎಣ್ಣೆ ವಿತರಣೆಯಾಗದಿದ್ದಲ್ಲಿ ನೋಟಾ ಅಭಿಯಾನ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಗಂಗೊಳ್ಳಿ ವಲಯ ಸಾಂಪ್ರದಾಯಿಕ ಮೀನುಗಾರರ ಸಂಘವು ಈ ಎಚ್ಚರಿಕೆ ನೀಡಿದೆ. ಸಂಘದ ಅಧ್ಯಕ್ಷ ಯಶವಂತ ಖಾರ್ವಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಎಲ್ಲ ಸಚಿವರು, ಸಂಸದರು, ಶಾಸಕರಿಗೆ ನಮ್ಮ ಸಂಕಷ್ಟದ ಬಗ್ಗೆ ವಿವರಿಸಿ ಮನವಿ ಕಳುಹಿಸಿದ್ದೇವೆ. ಆದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮತ್ತು ನಮಗೆ ಸೀಮೆಎಣ್ಣೆ ಬಿಡುಗಡೆ ಮಾಡಲು ಅವರ್ಯಾರಿಗೂ ಇಲ್ಲಿಯವರೆಗೆ ಸಾಧ್ಯವಾಗಿಲ್ಲ ಎಂದು ಹರಿಹಾಯ್ದರು.
ಮುಂದಿನ 20 ದಿನದೊಳಗೆ 7000 ಕೆ.ಎಲ್ ಸೀಮೆಎಣ್ಣೆ ವಿತರಣೆಯಾಗದಿದ್ದಲ್ಲಿ ಗಂಗೊಳ್ಳಿಯ ಸಾಂಪ್ರದಾಯಿಕ ಮೀನುಗಾರರು ನೋಟಾ ಅಭಿಯಾನ ನಡೆಸಲು ತೀರ್ಮಾನಿಸಿದ್ದಾರೆ. ಅಭಿಯಾನ ನಡೆಸುವ ಮುನ್ನ ಕರಾವಳಿ ಜಿಲ್ಲೆಗಳ ಎಲ್ಲ ಶಾಸಕರಿಗೆ ಪತ್ರ ರವಾನಿಸಿ ಅಭಿಯಾನವನ್ನು ವಿಸ್ತರಿಸಲಾಗುವುದು. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದವರು ತಿಳಿಸಿದರು.