ಕಾಸರಗೋಡು, ಜ 07 (DaijiworldNews/DB): ಕಾಸರಗೋಡಿನಲ್ಲಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ಈಗ ಅಮೆರಿಕಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ!
ಕಾಸರಗೋಡು ಬಳಾಲ್ ಎಂಬಲ್ಲಿನ 51 ವರ್ಷದ ಸುರೇಂದ್ರನ್ ಕೆ. ಪಟೇಲ್ ಅವರೇ ಸಾಧನೆಯ ಶಿಖರವೇರಿದ ಭಾರತೀಯ. ಯುಎಸ್ ರಾಜ್ಯದ ಟೆಕ್ಸಾಸ್ನ 240ನೇ ಡಿಸ್ಟ್ರಿಕ್ಟ್ ಕೋರ್ಟ್ ಜಡ್ಜ್ ಆಗಿ ಸುರೇಂದ್ರನ್ ನೇಮಕಗೊಂಡಿದ್ದಾರೆ. ಹೊಸ ವರ್ಷದಂದೇ ಅವರು ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಸಾಧನೆಗೆ ಆರ್ಥಿಕತೆ, ಬಡತನ ಅಡ್ಡಿಯಾಗದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ವಕೀಲರಾಗುವ ಮುನ್ನ ಕಾಸರಗೋಡಿನಲ್ಲಿ ಬೀಡಿ ಫ್ಯಾಕ್ಟರಿಯೊಂದರಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಸುರೇಂದ್ರನ್, ತಮ್ಮ ಸಾಧನೆಯ ಕನಸಿನೊಂದಿಗೆ ಎಲ್ಎಲ್ಬಿ ಪದವಿಯನ್ನು ಪೂರೈಸಿದರು. ಬಳಿಕ ಸುಮಾರು 10 ವರ್ಷ ಕಾಲ ಕರ್ನಾಟಕದಲ್ಲೇ ಸೇವೆ ಸಲ್ಲಿಸಿದರು. ದೆಹಲಿಯಲ್ಲಿ ನರ್ಸ್ ಆಗಿದ್ದ ಕಾಸರಗೋಡು ಮೂಲದ ಮಹಿಳೆಯನ್ನು ವರಿಸಿದ ಬಳಿಕ ಸುಪ್ರೀಂಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು. ಬಳಿಕ ಪತ್ನಿಯೊಂದಿಗೆ ಅಮೆರಿಕಾಗೆ ತೆರಳಿದ ಸುರೇಂದ್ರನ್ ಅಲ್ಲಿಯೂ ವಕೀಲಿಕೆ ಮಾಡುತ್ತಿದ್ದರು. ಬಳಿಕ ಬಾರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಹೊಸ ಸಾಧನೆಯ ಮೈಲಿಗಲ್ಲು ತಲುಪಿದರು. ತಮ್ಮ ವಕೀಲಿಕೆಯ ಅನುಭವದೊಂದಿಗೆ ಇದೀಗ ಅಮೆರಿಕಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಸ್ಪೂರ್ತಿದಾಯಕ ಬದುಕು
ಸುರೇಂದ್ರನ್ ಅವರ ವೃತ್ತಿ ಜೀವನದ ಪ್ರಯಾಣವು ಕಠಿಣವಾಗಿದ್ದರೂ, ಸ್ಪೂರ್ತಿದಾಯಕವಾಗಿದೆ. ಹಣಕಾಸಿನ ತೀವ್ರ ಮುಗ್ಗಟ್ಟಿನಿಂದಾಗಿ ಬಾಲ್ಯವನ್ನು ಬೀಡಿ ಕಟ್ಟುವುದರಲ್ಲಿಯೇ ಕಳೆದ ಸುರೇಂದ್ರನ್ ಹಾಗೂ ಕುಟುಂಬಕ್ಕೆ ಹಣ ಸಂಪಾದನೆಗೆ ಇದೊಂದೇ ದಾರಿಯಾಗಿತ್ತು. 10ನೇ ತರಗತಿ ಬಳಿಕ ವಿದ್ಯಾಭ್ಯಾಸವನ್ನು ತೊರೆದು ಬೀಡಿ ಕಟ್ಟುವ ಅನಿವಾರ್ಯ ಅವರದಾಗಿತ್ತು. ಆದರೆ ಓದಬೇಕೆಂಬ ಅತೀವ ತುಡಿತದಿಂದಾಗಿ ಒಂದು ವರ್ಷದ ಬಳಿಕ ಮತ್ತೆ ಶಿಕ್ಷಣ ಪಡೆಯಲು ಮುಂದಾದರು. ಈಕೆ ನಾಯನಾರ್ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿಗೆ ಪ್ರವೇಶ ಗಿಟ್ಟಿಸಿಕೊಂಡು ಅಧ್ಯಯನದೊಂದಿಗೆ ಬೀಡಿ ಕಟ್ಟುವ ಕಾಯಕವನ್ನು ಮುಂದುವರಿಸಿದರು. ಈ ನಡುವೆ ಅವರಿಗೆ ಕಾಲೇಜಿನಲ್ಲಿ ಹಾಜರಾತಿಯ ಕೊರತೆ ಕಾಣಿಸಿದಾಗ ಪರೀಕ್ಷೆಗೆ ಕುಳಿತುಕೊಳ್ಳಲು ಸಮಸ್ಯೆ ಎದುರಾಯಿತು. ಆದರೆ ವಕೀಲನಾಗಲೇಬೇಕೆಂದು ನಿರ್ಧರಿಸಿದ್ದ ಸುರೇಂದ್ರನ್ ಶಿಕ್ಷಕರಲ್ಲಿ ಕಾಡಿಬೇಡಿ ಕೊನೆಗೂ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಗಿಟ್ಟಿಸಿಕೊಂಡರು.
ಕಾಲೇಜಿಗೆ ಟಾಪರ್
ಬೀಡಿ ಕಟ್ಟುವ ಕೆಲಸದಿಂದಾಗಿ ತರಗತಿಗೂ ಸರಿಯಾಗಿ ಹಾಜರಾಗಲು ಸಾಧ್ಯವಾಗದೇ ದೈನಂದಿನ ಪಾಠಗಳನ್ನು ಅಭ್ಯಸಿಸುವುದೇ ಸವಾಲಾಗಿತ್ತು. ಒಂದು ವೇಳೆ ಉತ್ತಮ ಅಂಕ ಬಾರದಿದ್ದರೆ ಓದು ನಿಲ್ಲಿಸುವುದೆಂದೇ ನಿರ್ಧರಿಸಿದ್ದರು. ಆದರೆ ಫಲಿತಾಂಶ ಬಂದಾಗ ಸುರೇಂದ್ರನ್ ಅವರೇ ಟಾಪರ್ ಆಗಿದ್ದರು. ಇದರಿಂದ ಅವರಿಗೆ ಮುಂದಿನ ತರಗತಿಯಲ್ಲಿ ಶಿಕ್ಷಕರಿಂದ ಹೆಚ್ಚಿನ ಬೆಂಬಲ ಸಿಕ್ಕಿತ್ತು. ಬಳಿಕ ಪದವಿಯಲ್ಲಿಯೂ ಅಗ್ರಸ್ಥಾನಿಯಾಗಿ ಹೊರ ಹೊಮ್ಮಿದ್ದರು. ಬಹುಶಃ ಈ ಎಲ್ಲಾ ಫಲಿತಾಂಶಗಳು ಅವರ ವಕೀಲನಾಗುವ ಕನಸಿಗೆ ಬುನಾದಿಯಾಗಿತ್ತು.
ಹಣ ಹೊಂದಿಸಲು ಹೊಟೇಲ್ನಲ್ಲಿ ದುಡಿಮೆ
ಆದರೆ ಕ್ಯಾಲಿಕಟ್ನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಮಾಡಬೇಕೆಂಬ ಅವರ ಆಸೆಗೆ ಅದೇ ಆರ್ಥಿಕ ಮುಗ್ಗಟ್ಟು ಸವಾಲಾಗಿ ನಿಂತಿತ್ತು. ಸ್ನೇಹಿತರ ಆರ್ಥಿಕ ಸಹಾಯದಿಂದ ಮೊದಲ ವರ್ಷದ ಎಲ್ಎಲ್ಬಿ ಪೂರ್ಣಗೊಳಿಸಿದರು. ಆದರೆ ಬಳಿಕದ ಅಧ್ಯಯನಕ್ಕಾಗಿ ಆರ್ಥಿಕ ದಾರಿ ಹುಡುಕಲೇ ಬೇಕಿತ್ತು. ಹೀಗಾಗಿ ಅನಿವಾರ್ಯವಾಗಿ ಹೊಟೇಲ್ನಲ್ಲಿ ಕೆಲಸ ಮಾಡುವ ದಾರಿಯನ್ನು ಹುಡುಕಿಕೊಂಡರು. ಸಂಕಷ್ಟಗಳನ್ನೇ ಸವಾಲಾಗಿ ಸ್ವೀಕರಿಸಿದ ಸುರೇಂದ್ರನ್ ಕೊನೆಗೂ ತಮ್ಮಿಷ್ಟದ ವಕೀಲಿಕೆ ವೃತ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.