ಕಾಸರಗೋಡು, ಜ 06 (DaijiworldNews/SM): ತಂಡವೊಂದು ಬಸ್ಸನ್ನು ತಡೆದು ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆಗೆತ್ನಿಸಿದ ಘಟನೆ ಗುರುವಾರ ರಾತ್ರಿ ಕಯ್ಯಾರಿನಲ್ಲಿ ನಡೆದಿದ್ದು, ಘಟನೆಯನ್ನು ಖಂಡಿಸಿ ಧರ್ಮತ್ತಡ್ಕ-ಬಂದ್ಯೋಡು ರಸ್ತೆಯಲ್ಲಿ ಶುಕ್ರವಾರ ಖಾಸಗಿ ಬಸ್ಸುಗಳು ಸಂಚಾರ ಮೊಟಕುಗೊಳಿಸಿ ಮುಷ್ಕರ ನಡೆಸಿದರು.
ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಇತರ ಪ್ರಯಾಣಿಕರು ಸಮಸ್ಯೆಗೊಳಗಾದರು. ಸಂಜೆ ಧರ್ಮತ್ತಡ್ಕದಿಂದ ಕಾಸರಗೋಡಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಕೆಲ ವಿದ್ಯಾರ್ಥಿಗಳು ಉಪಟಳ ನೀಡಿದ್ದು, ಇದನ್ನು ಬಸ್ಸು ಸಿಬ್ಬಂದಿಗಳು ಪ್ರಶ್ನಿಸಿದ್ದರು. ಇದಾದ ಬಳಿಕ ರಾತ್ರಿ ಕಾಸರಗೋಡಿನಿಂದ ಧರ್ಮತ್ತಡ್ಕಕ್ಕೆ ಮರಳುತ್ತಿದ್ದ ಬಸ್ಸನ್ನು ಕಯ್ಯಾರಿನಲ್ಲಿ ತಡೆದ ತಂಡವು ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆಗೆತ್ನಿಸಿದ್ದಾರೆ.
ಬಸ್ಸಿನ ಕೀಲಿ ಕೈಯನ್ನು ತೆಗೆದು ಎಸೆದಿದ್ದು, ಸ್ಥಳಕ್ಕಾಗಮಿಸಿದ ನಾಗರಿಕರು ಮಾತುಕತೆ ನಡೆಸಿದ ಬಳಿಕ ಬಸ್ಸು ಸಂಚಾರ ಮುಂದುವರಿಸಿತು. ಈ ನಡುವೆ ಕೃತ್ಯವನ್ನು ಖಂಡಿಸಿ ಖಾಸಗಿ ಬಸ್ಸು ಮಾಲಕರು ಶುಕ್ರವಾರ ಯಾವುದೇ ಮುನ್ಸೂಚನೆ ಇಲ್ಲದೆ ಮುಷ್ಕರ ನಡೆಸಿದರು.