ಉಡುಪಿ, ಜ 06 (DaijiworldNews/DB): ಐಸಿಸ್ ಉಗ್ರ ಸಂಚು ಸಂಬಂಧ ಉಡುಪಿಯಲ್ಲಿ ಬಂಧಿತನಾದ ರೇಶಾನ್ ಕುಟುಂಬದ ಬಗ್ಗೆ ತನಿಖೆ ನಡೆಸುವುದರೊಂದಿಗೆ ಪ್ರಕರಣದ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಉಡುಪಿಯಲ್ಲಿ ಎನ್ಐಎಯಿಂದ ಬಂಧಿತನಾದ ರಿಶಾನ್ ಉಡುಪಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಅವರ ಪುತ್ರ. ಇವರು ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತನಾಗಿದ್ದು, ಸಿದ್ದರಾಮಯ್ಯ, ಡಿಕೆಶಿ ಮತ್ತು ಯು.ಟಿ. ಖಾದರ್ ಪರಮಾಪ್ತ. ಹೀಗಾಗಿ ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು. ಪ್ರೊಮೋಶನ್ ಕೊಟ್ಟು ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುತ್ತಾರೆಯೇ ಅಥವಾ ಸ್ಥಾನದಿಂದ ಉಚ್ಚಾಟನೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಇನ್ನು ಆತನ ತಾಯಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿ. ಆಕೆಯ ಬಗ್ಗೆಯೂ ಶಿಕ್ಷಣ ಸಚಿವರಿಗೆ ಲಿಖಿತ ದೂರು ನೀಡಲಾಗಿದೆ. ಆಕೆ ರಾಷ್ಟ್ರೀಯತೆ ಮತ್ತು ಪ್ರಧಾನಿ ಮೋದಿ ವಿರುದ್ದ ಕೆಲಸ ಮಾಡುತ್ತಿದ್ದರಲ್ಲದೆ ಕಾಲೇಜು ವಿರುದ್ದವಾಗಿ ಹೇಳಿಕೆ ಕೊಡುವ ಆಡಿಯೋಗಳನ್ನೂ ಸಚಿವರಿಗೆ ನೀಡಲಾಗಿದೆ ಎಂದು ತಿಳಿಸಿದರು.
ತಾಜುದ್ದೀನ್ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಆದರೆ ಏಕಾಏಕಿ ಇತ್ತೀಚೆಗೆ ಶ್ರೀಮಂತನಾಗಿರುವ ಬಗ್ಗೆ ಸ್ಥಳೀಯರೂ ಗುಮಾನಿ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ವಿಚಾರವಾಗಿ ಬಂಧಿತ ರೆಶಾನ್ ಕುಟುಂಬವನ್ನು ಸಮಗ್ರವಾಗಿ ತನಿಖೆಗೊಳಪಡಿಸಬೇಕು. ಅಲ್ಲದೆ, ಕರಾವಳಿಯಲ್ಲಿ ಇಂತಹ ನಿಗೂಢ ಚಟುವಟಿಕೆಗಳ ಬಗ್ಗೆ ತನಿಖೆ ಆಗಬೇಕು ಎಂದು ರಘುಪತಿ ಭಟ್ ಒತ್ತಾಯಿಸಿದರು.