ಮಲ್ಪೆ,ಮಾ 09(MSP): ಮಲ್ಪೆ ಬೀಚ್ ನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಗ್ಗಜಗ್ಗಾಟದಲ್ಲಿ ಪಾಲ್ಗೊಂಡು ಗಮನಸೆಳೆದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮಹಿಳೆಯರಿಗೆ ವಿವಿಧ ಕ್ರೀಡಾಕೂಟ ಮಲ್ಪೆ ಬೀಚ್ ನಲ್ಲಿ ನಡೆಯಿತು. ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಕಾರ್ಯಕ್ರಮ ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ, ಮತದಾನದ ಜಾಗೃತಿಗಾಗಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯ ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಸಂವಿಧಾನವು ಪ್ರತಿಯೊಬ್ಬರಿಗೂ ಈ ಮತದಾನದ ಹಕ್ಕನ್ನು ನೀಡಿದ್ದು, ಎಲ್ಲರೂ ಯೋಚಿಸಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ.ಬಿ ರೂಪೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಎನ್. ಗೊನ್ಸಾಲ್ವಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರನ್ನು ಓಳಗೊಂಡ ತಂಡ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದರು.
ಕ್ರೀಡಾಕೂಟದಲ್ಲಿ ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯರು, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ವಿವಿಧ ಇಲಾಖೆಯ ಮಹಿಳಾ ಸಿಬ್ಬಂಧಿಗಳು ಭಾಗವಹಿಸಿದರು. ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ ಹಾಗೂ ಮೆಹೆಂದಿ ಮೂಲಕ ಮತದಾನ ಸಂದೇಶ ನೀಡುವ ಚಿತ್ರಣವನ್ನು ಬಿಡಿಸುವ ಕಾರ್ಯಕ್ರಮ ನಡೆದವು.