ಮಂಗಳೂರು, ಜ 05 ( DaijiworldNews/MS): ಬಿಲ್ಲವ, ಈಡಿಗ, ನಾಮಧಾರಿ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಗೋಕರ್ಣನಾಥ ಕ್ಷೇತ್ರದಿಂದ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ 41 ದಿನಗಳ ಪಾದಯಾತ್ರೆಗೆ ಸಮುದಾಯದ ಮುಖಂಡ, ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಇಂದು ಚಾಲನೆ ನೀಡಿದ್ದಾರೆ.
ಈ ಪಾದಯಾತ್ರೆಯೂ ಮಂಗಳೂರಿನಿಂದ ಹೊರಟು ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪುವ ಈ ಪಾದಾಯಾತ್ರೆ 658 ಕಿ.ಮೀ ಕ್ರಮಿಸಲಿದೆ.
ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆ ಮಾಡಿ ₹ 500 ಕೋಟಿ ಅನುದಾನ ಮಂಜೂರು ಮಾಡಬೇಕು. ಕುಲಕಸುಬು ಸೇಂದಿ ನಿಷೇಧ ರದ್ದುಪಡಿಸಬೇಕು ಅಥವಾ ಈ ವೃತ್ತಿನಿರತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ನಿಲ್ಲಿಸಬೇಕು, ಸಾರಾಯಿ ಹಾಗೂ ಸೇಂದಿ ನಿಷೇಧದಿಂದ ನಿರ್ಗತಿಕರಾದ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಬಿಲ್ಲವರಿಗೆ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಬೇಕು. ಪ್ರವರ್ಗ 2ರಲ್ಲಿರುವ ಜಾತಿಗಳಿಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡಬಾರದು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಯಾತ್ರೆ ಮೊದಲ ದಿನ ಕುಳಾಯಿಯಲ್ಲಿ ವಾಸ್ತವ್ಯ ಹೂಡಲಿದ್ದು , ಮರುದಿನ ಸಂಜೆ ಹೆಜಮಾಡಿ ತಲುಪಲಿದೆ.