ಮಂಗಳೂರು, ಜ 06 (DaijiworldNews/DB): ಐಸಿಸ್ ಉಗ್ರ ಸಂಚು ಪ್ರಕರಣದ ಆರೋಪಿಗಳೊಂದಿಗೆ ಸಂಬಂಧ ಹೊಂದಿದ ಆರೋಪದಲ್ಲಿ ಎನ್ಐಎಯಿಂದ ಗುರುವಾರ ಬಂಧಿತರಾಗಿರುವ ಇಬ್ಬರು ಆರೋಪಿಗಳು ಕ್ರಿಪ್ಟೋ ವ್ಯಾಲೆಟ್ ಮೂಲಕ ಐಸಿಸ್ ಉಗ್ರ ಸಂಘಟನೆಯಿಂದ ಹಣ ಪಡೆಯುತ್ತಿದ್ದರು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಈ ಸಂಬಂಧ ಎನ್ಐಎ ಅಧಿಕೃತ ಹೇಳಿಕೆ ನೀಡಿದ್ದು, ಬಂಧಿತರಾದ ಉಡುಪಿ ಬ್ರಹ್ಮಾವರ ನಿವಾಸಿ ರೇಶಾನ್ ಶೇಖ್ ಹಾಗೂ ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದಲ್ಲಿ ಬಂಧಿಸಲ್ಪಟ್ಟ ಹುಜೈರ್ ಫರ್ಹಾನ್ ಇಸ್ಲಾಮಿಕ್ ಸ್ಟೇಟ್ಸ್ನ ಕೆಲಸಗಳಿಗಾಗಿ ಕ್ರಿಪ್ಟೋ ವ್ಯಾಲೆಟ್ ಮೂಲಕ ಐಸಿಸ್ ಸಂಘಟನೆಯಿಂದ ಹಣ ಪಡೆದಿದ್ದರು ಎಂದು ತಿಳಿಸಿದೆ.
ಮಂಗಳೂರಿನ ಕಾಲೇಜೊಂದಕ್ಕೆ ಗುರುವಾರ ದಾಳಿ ನಡೆಸಿ ರೇಶಾನ್ ಶೇಖ್ನನ್ನು ಮತ್ತು ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದಲ್ಲಿ ಹುಜೈರ್ ಫರ್ಹಾನ್ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ತುಂಗಾ ತೀರದಲ್ಲಿ ಸ್ಪೋಟ ಸೇರಿದಂತೆ ಕೆಲವು ಪ್ರಕರಣಗಳ ಆರೋಪಿ ಮಾಜ್ ಮುನೀರ್ನ ಸಹಪಾಠಿಯಾಗಿದ್ದ ರೇಶನ್ ತಾಜುದ್ದೀನ್ ಆತನಿಂದಲೇ ಪ್ರೇರಣೆಗೊಂಡಿದ್ದ. ಇದೇ ವೇಳೆ ಇಸ್ಲಾಮಿಕ್ ಸ್ಟೇಟ್ಸ್ನ ಕೆಲಸಗಳಿಗಾಗಿ ಬಂಧಿತರಿಬ್ಬರೂ ಕ್ರಿಪ್ಟೋ ವ್ಯಾಲೆಟ್ ಮೂಲಕ ಐಸಿಸ್ನಿಂದ ಹಣ ಪಡೆಯುತ್ತಿದ್ದರು ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಇವರಿಬ್ಬರು ಬೆಂಕಿ ಹಚ್ಚುವುದು, ವಾಹನಗಳ ಮೇಲೆ ದಾಳಿ ಸೇರಿದಂತೆ ವಿವಿಧ ಹಿಂಸಾತ್ಮಕ ಕೃತ್ಯ ನಡೆಸಲು ಸಿದ್ದತೆ ನಡೆಸುತ್ತಿದ್ದರು ಎಂಬುದೂ ತಿಳಿದು ಬಂದಿದೆ.
ಬಂಧಿತ ರೇಶಾನ್ ಕಲಿಯುತ್ತಿದ್ದ ಕಾಲೇಜಿನ ಉಪನ್ಯಾಸಕರಿಂದ ಅಧಿಕಾರಿಗಳ ತಂಡ ಆತನ ಚಟುವಟಿಕೆ ಕುರಿತು ಮಾಹಿತಿ ಪಡೆದುಕೊಂಡಿದೆ. ಬ್ರಹ್ಮಾವರದ ವಾರಂಬಳ್ಳಿಯಲ್ಲಿರುವ ಆತನ ಮನೆಯಲ್ಲಿಯೂ ಶೋಧ ನಡೆದಿದ್ದು, ಅಗತ್ಯ ಮಾಹಿತಿ, ದಾಖಲೆಗಳನ್ನು ಪಡೆದುಕೊಂಡು ಕುಟುಂಬಿಕರನ್ನು ವಿಚಾರಣೆಗೊಳಪಡಿಸಿದೆ ಎಂದು ಮೂಲಗಳು ತಿಳಿಸಿವೆ.