ಮಂಗಳೂರು, ಜ 05 ( DaijiworldNews/MS): ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ಎಲ್ಲಾ ಮತಗಟ್ಟೆಗಳಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕ ತಿಳುವಳಿಕೆಗಾಗಿ ಜ.5ರಂದು ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಅವರು ತಿಳಿಸಿದರು.
ಅವರು ಜ.5ರ ಗುರುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅರ್ಹತಾ ದಿನ 2023ರ ಜನವರಿ 1ರಡಿ ಮತದಾರರ ಪಟ್ಟಿ ಪರಿಷ್ಕರಿಸಲಾಗಿದೆ, ಇಂದು ಅದನ್ನು ಪ್ರಕಟಿಸಲಾಗಿದೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ನೀಡಲಾಗಿದೆ ಎಂದರು.
ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರ ಅಧಿಕೃತ ಜಾಲತಾಣ https://ceo.karnataka.gov.in ಹಾಗೂ ಜಿಲ್ಲಾ ವೆಬ್ ಸೈಟ್ do.nic.in ನಲ್ಲಿ ಅಪ್ ಲೋಡ್ ಮಾಡಲಾಗುವುದು, ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ ಹಾಗೂ ಸರಿಯಾದ ಹೆಸರನ್ನು ನಮೂದುಗಳೊಂದಿಗೆ ನೋಂದಾಯಿಸಿದ ಬಗ್ಗೆ ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 8,50,552 ಪುರುಷ ಮತದಾರರು, 8,87,060 ಮಹಿಳಾ ಮತದಾರರು ಹಾಗೂ 76 ತೃತೀಯ ಲಿಂಗ ಮತದಾರರು ಸೇರಿದಂತೆ ಒಟ್ಟು 17,37,688 ಮತದಾರರು ಇದ್ದಾರೆ. ಇವರಲ್ಲಿ 47,174 ಮತದಾರರು ಸೇರ್ಪಡೆಯಾಗಿದ್ದಾರೆ. ವಿವಿಧ ಕಾರಣಗಳಿಂದ 18,441 ಪ್ರಕರಣಗಳನ್ನು ಕೈಬಿಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1860 ಮತಗಟ್ಟೆಗಳಿವೆ ಎಂದರು.
ಈ ಮೊದಲು ಒಂದು ವಿಧಾನಸಭಾ ಕ್ಷೇತ್ರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತಕ್ಕಾಗಿ ಚಾಲ್ತಿಯಲ್ಲಿದ್ದ ಅರ್ಜಿ ನಮೂನೆ-8ಎ ರಲ್ಲಿದ್ದ ಸೌಲಭ್ಯವನ್ನು ಪರಿಷ್ಕರಿಸಿದ್ದು, ನಮೂನೆ-8ರಲ್ಲಿ ಒದಗಿಸಲಾಗಿದೆ. 2022 ರ ಸೆಪ್ಟೆಂಬರ್ 1 ರ ನಂತರದಲ್ಲಿ ಸೇರ್ಪಡೆ ಅಥವಾ ತಿದ್ದುಪಡಿ ಮಾಡುವ ಮತದಾರರ ಗುರುತಿನ ಚೀಟಿಯನ್ನು ಸ್ಪೀಡ್ ಪೋಸ್ಟ್ ಮುಖಾಂತರ ಮತದಾರರಿಗೆ ವಿತರಣೆ ಮಾಡಲಾಗುವುದು. ಮತದಾರರ ಪಟ್ಟಿಯ ಪರಿಷ್ಕರಣೆಯ ಸಲುವಾಗಿ 1950 ಮತದಾರರ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಸೇರ್ಪಡೆ ತಿದ್ದುಪಡಿ ಇದ್ದಲ್ಲಿ ನಿಗದಿತ ನಮೂನೆಯಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಸಲ್ಲಿಸಲಾಗುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥ ಪಡಿಸಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹಾಗೂ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಗೋಷ್ಠಿಯಲ್ಲಿದ್ದರು.