ಕಾಸರಗೋಡು, ಜ 05 (DaijiworldNews/HR): ಕೇರಳದ ಕೊಂಕಣಿ ಭಾಷಿಕರ ರಾಜಧಾನಿ ಎಂದೇ ಖ್ಯಾತವಾಗಿರುವ ಕಾಸರಗೋಡು ಜಿಲ್ಲೆಯ ಬೇಳದಲ್ಲಿ ಕವಿತಾ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ನಡೆಯುವ 'ಕವಿತಾ ಫೆಸ್ತ್' ಜ. 8 ರಂದು ನಡೆಯಲಿದೆ.
ಕಾರ್ಯಕ್ರಮವನ್ನು ಕೊಂಕಣಿ ಬರಹಗಾರ ಹಾಗೂ ಪತ್ರಕರ್ತರಾದ ಆಸ್ಟಿನ್ ಡಿ ಸೋಜಾ ಪ್ರಭು ಉದ್ಘಾಟಿಸಲಿದ್ದು, ಯುವ ಬರಹಗಾರರಾದ ಸ್ಟ್ಯಾನಿ ಬೇಳ ಹಾಗೂ ಕೆಬಿಎಂ, ಗೋವಾ ಅಧ್ಯಕ್ಷ ಅನ್ವೇಶ ಸಿಂಗ್ಭಾಳ್ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.
ಕವಿತಾ ಫೆಸ್ತ್ ಕಾರ್ಯಕ್ರಮಕ್ಕೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಕವಿಗಳು ಮತ್ತು ಕಾವ್ಯಾಸಕ್ತರು ಭಾಗವಹಿಸಲಿದ್ದಾರೆ.
ಇನ್ನು ಕಾರ್ಯಕ್ರಮದ ಭಾಗವಾಗಿ ನೆಲ್ಸನ್ ಹಾಗೂ ಲವೀನಾ ರೋಡ್ರಿಕ್ಸ್ ಪ್ರಾಯೋಜಕತ್ವದ ಚಾಫ್ರಾ ದೆಕೋಸ್ತಾ ಸ್ಮಾರಕ ಅಖಿಲ ಭಾರತ ಕವನ ವಾಚನ ಸ್ಪರ್ಧೆ ನಡೆಯಲಿದೆ.
ಕಾಸರಗೋಡಿನಲ್ಲಿ ಕೊಂಕಣಿಗರು ಎಂಬ ವಿಷಯದ ಮೇಲೆ ಕೊಂಕಣಿ ಬರಹಗಾರ ಸಂತೋಶ್ ಪೆರ್ಲ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಯಲಿದ್ದು, ವಿಲ್ಲಿಯಂ ಪಾಯ್ಸ್ ಸಂವಾದವನ್ನು ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೊಂಕಣಿ ಕವಿ ಹಾಗೂ ಸಾಹಿತಿಗಳಾದ ವಿಲ್ಸನ್ ಕಟೀಲ್ ರಚನೆಯ 'ಚಿತುರ್ಲೆಚೆ ಅಚ್ಛೇ ದಿನ್' ಕವನ ಸಂಕಲನ ಬಿಡುಗಡೆಗೊಳ್ಳಲಿದೆ.
ಇನ್ನು ಜ. 8 ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ನಿರಾಕರ್ ಎಜುಕೇಶನ್ ಸೊಸಾಯ್ಟಿ ಅಧ್ಯಕ್ಷರಾದ ಪ್ರಶಾಂತ್ ನಾಯ್ಕ್ ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ.
ಗೀತಾರಚನೆಕಾರ ರತ್ನಮಾಲ ದಿವಾಕರ್ ಹಾಗೂ ಅನಿವಾಸಿ ಉಧ್ಯಮಿ ಗೋಕುಲ್ ನಾಥ್ ಪ್ರಭು ಉಪಸ್ಥಿತರಿರುವರು. ಹಿರಿಯ ಕೊಂಕಣಿ ಕವಯತ್ರಿ ಇಂದು ಅಶೋಕ್ ಗೇರುಸೊಪ್ಪೆಯವರಿಗೆ ಮಥಾಯಸ್ ಕುಟಾಮ್ ಕವಿತಾ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಬೇಳ ಕೇರಳದಲ್ಲಿ ನೆಲೆಗೊಂಡಿರುವ ಗ್ರಾಮವಾಗಿದ್ದು, ಇದು ಕೇರಳದಲ್ಲಿ ಅತಿ ಹೆಚ್ಚು ಕೊಂಕಣಿ ಮಾತನಾಡುವ ಜನರನ್ನು ಹೊಂದಿದೆ. ಮಲಯಾಳಂ ರಾಜ್ಯ ಭಾಷೆಯಾಗಿದ್ದರೂ ಗ್ರಾಮವು ಕೊಂಕಣಿ ಭಾಷೆ, ಕಲೆ ಮತ್ತು ಕರಾವಳಿ ಕರ್ನಾಟಕ ಮತ್ತು ಗೋವಾದಂತಹ ಸಂಸ್ಕೃತಿಯ ಬಲವಾದ ಪ್ರಭಾವವನ್ನು ಹೊಂದಿದೆ. ಕೇರಳದ ಇತರ ಜಿಲ್ಲೆಗಳಿಗೆ ಹೋಲಿಸಿದರೆ 25,000 ಕ್ಕೂ ಹೆಚ್ಚು ಕೊಂಕಣಿ ಮಾತನಾಡುವ ಜನರು ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.