ಮಂಗಳೂರು, ಜ 04 ( DaijiworldNews/MS): ಬಿಲ್ಲವ, ಈಡಿಗ, ನಾಮಧಾರಿ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಇಲ್ಲಿನ ಗೋಕರ್ಣನಾಥ ಕ್ಷೇತ್ರದಿಂದ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಇದೇ 6ರಂದು 41 ದಿನಗಳ ಪಾದಯಾತ್ರೆ ಆರಂಭವಾಗಲಿದೆ.
658 ಕಿ.ಮೀ ಹಾದಿಯ ಪಾದಯಾತ್ರೆಗೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ, ತೆಲಂಗಾಣದ ಸಚಿವ ಶ್ರೀನಿವಾಸ್ ಗೌಡ್ ಚಾಲನೆ ನೀಡುವರು. ಆಂಧ್ರಪ್ರದೇಶ ಸರ್ಕಾರದ ಕೃಷಿಸಚಿವ ಜೋಗಿ ರಮೇಶ್, ಆಂಧ್ರಪ್ರದೇಶದ ರಾಜಮುಂಡ್ರಿ ಸಂಸದ ಮರ್ಗಣಿ ಭರತ್, ಬಹುಭಾಷಾ ಚಿತ್ರನಟ ಸುಮನ್ ತಲ್ವಾರ್ ಹಾಗೂ ಈ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.
ಈ ಪಾದಯಾತ್ರೆಯೂ ಮಂಗಳೂರಿನಿಂದ ಹೊರಟು ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪುವ ಈ ಪಾದಾಯಾತ್ರೆ 658 ಕಿ.ಮೀ ಕ್ರಮಿಸಲಿದೆ.
ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆ ಮಾಡಿ ₹ 500 ಕೋಟಿ ಅನುದಾನ ಮಂಜೂರು ಮಾಡಬೇಕು. ಕುಲಕಸುಬು ಸೇಂದಿ ನಿಷೇಧ ರದ್ದುಪಡಿಸಬೇಕು ಅಥವಾ ಈ ವೃತ್ತಿನಿರತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ನಿಲ್ಲಿಸಬೇಕು, ಸಾರಾಯಿ ಹಾಗೂ ಸೇಂದಿ ನಿಷೇಧದಿಂದ ನಿರ್ಗತಿಕರಾದ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಬಿಲ್ಲವರಿಗೆ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಬೇಕು. ಪ್ರವರ್ಗ 2ರಲ್ಲಿರುವ ಜಾತಿಗಳಿಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡಬಾರದು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಯಾತ್ರೆ ಮೊದಲ ದಿನ ಕುಳಾಯಿಯಲ್ಲಿ ವಾಸ್ತವ್ಯ ಹೂಡಲಿದ್ದು , ಮರುದಿನ ಸಂಜೆ ಹೆಜಮಾಡಿ ತಲುಪಲಿದೆ.
ರಾಜಕೀಯ ಲಾಭ:
ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಚಿಂತನೆಗೆ ವಿರುದ್ಧವಾಗಿದೆ. ಇದು ರಾಜಕೀಯ ಲಾಭಕ್ಕಾಗಿ ನಡೆಸಲಾಗುತ್ತಿದೆ. ನಾರಾಯಣ ಗುರುಗಳ ತತ್ವಚಿಂತನೆಯನ್ನು ಅನುಸರಿಸುವ ಯಾರೂ ಈ ಪಾದಯಾತ್ರೆಯನ್ನು ಬೆಂಬಲಿಸಬಾರದು. ನಾರಾಯಣ ಗುರುಗಳು ಮದ್ಯಪಾನ, ಮದ್ಯ ಮಾರಾಟದ ವಿರೋಧಿಯಾಗಿದ್ದರು. ಆದರೆ ಪ್ರಣವಾನಂದರು ಶೇಂದಿ ಇಳಿಸುವುದನ್ನು ಪ್ರೋತ್ಸಾಹಿಸುವ ಮೂಲಕ ಬಿಲ್ಲವ ಸಮುದಾಯವನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.