ಮಂಗಳೂರು, ಜ 04 ( DaijiworldNews/MS): ಅಯೋಧ್ಯೆಯ ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ, ತ್ರಿವಳಿ ತಲಾಖ್ ಮತ್ತು ನೋಟ್ ಬ್ಯಾನ್ ಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿದವರಲ್ಲಿ ಒಬ್ಬರಾಗಿರುವ ದಕ್ಷಿಣ ಕನ್ನಡ ಮೂಡುಬಿದಿರೆ ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಇಂದು (ಜ. 4) ನಿವೃತ್ತರಾಗಿದ್ದಾರೆ.
ಅಯೋಧ್ಯೆ ಜಮೀನು ವಿವಾದದ ತೀರ್ಪು ಪ್ರಕಟಿಸಿದ್ದ ಪಂಚ ಪೀಠದ ಐವರು ನ್ಯಾಯಮೂರ್ತಿಗಳಲ್ಲಿ ಅಬ್ದುಲ್ ನಜೀರ್ ಏಕೈಕ ಮುಸ್ಲಿಮ್ ನ್ಯಾಯಮೂರ್ತಿಯಾಗಿದ್ದರು.
ಕರಾವಳಿಯ ಹೆಮ್ಮೆ ನ್ಯಾಯಮೂರ್ತಿ ಅಬ್ದುಲ್ ನಜೀರ್ :
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಬೆಳುವಾಯಿಯ ಕಾನದವರು. ದಿ. ಫಕೀರ ಸಾಹೇಬ್ ಹಾಗೂ ದಿ. ಹಮೀದಾಬಿ ದಂಪತಿಯ ಪುತ್ರರಾಗಿರುವ ಅಬ್ದುಲ್ ನಜೀರ್ ಅವರಿಗೆ ಐವರು ಒಡಹುಟ್ಟಿದವರಿದ್ದಾರೆ.ಜ. 5, 1958ರಲ್ಲಿ ಹುಟ್ಟಿದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಬೆಳುವಾಯಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಆ ಬಳಿಕ ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಅಭ್ಯಾಸಿಸಿ ಮಂಗಳೂರಿನ ಎಸ್ ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
ಕಾನೂನು ಪದವಿ ಪಡೆದ ಬಳಿಕ ನಜೀರ್ ಅವರು 1983 ರಲ್ಲಿ ವಕೀಲರಾಗಿ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ನಲ್ಲಿ ಅಭ್ಯಾಸ ಮಾಡತೊಡಗಿದರು. ಇದಾದ ಬಳಿಕ ಮೇ 2003 ರಲ್ಲಿ, ಅವರು ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಬಳಿಕ , ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ಫೆಬ್ರವರಿ 2017 ರಲ್ಲಿ, ಕರ್ನಾಟಕ ಹೈಕೋರ್ಟ್ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವಾಗ, ನಜೀರ್ ಅವರು ಭಾರತದ ಸುಪ್ರೀಂ ಕೋರ್ಟ್ಗೆ ಪದೋನ್ನತಿ ಪಡೆದರು. ವಿಶೇಷ ಎಂದರೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗದೇ ಉನ್ನತೀಕರಿಸಲ್ಪಟ್ಟ ಮೂರನೇ ನ್ಯಾಯಾಧೀಶರಲ್ಲಿ ನಜೀರ್ ಒಬ್ಬರಾಗಿದ್ದಾರೆ.
ಐತಿಹಾಸಿಕ 'ತ್ರಿವಳಿ' ತೀರ್ಪು
ಸುಪ್ರೀಂ ಕೋರ್ಟ್ನಲ್ಲಿ, 2017ರಲ್ಲಿ ವಿವಾದಾತ್ಮಕ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ಬಹು-ಧರ್ಮೀಯ ಪೀಠದಲ್ಲಿ ಅಬ್ದುಲ್ ನಜೀರ್ ಏಕೈಕ ಮುಸ್ಲಿಂ ನ್ಯಾಯಾಧೀಶರಾಗಿದ್ದರು
ಅಯೋಧ್ಯೆ ವಿವಾದದ ಐತಿಹಾಸಿಕ 2019 ರ ಸುಪ್ರೀಂ ಕೋರ್ಟ್ ಪಂಚಪೀಠವೂ ಅಬ್ದುಲ್ ನಜೀರ್ ಭಾಗವಾಗಿದ್ದರು. ಸಿಜೆಐ ರಂಜನ್ ಗೋಗೊಯಿ, ಜಸ್ಟೀಸ್ ಎಸ್ ಎ ಬೋಬ್ಡೆ, ಜಸ್ಟೀಸ್ ಡಿವೈ ಚಂದ್ರಚೂಡ್, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಅಬ್ದುಲ್ ನಝೀರ್ ಸದಸ್ಯರನ್ನು ಒಳಗೊಂಡಿತ್ತು .ಇದರಲ್ಲಿ ಅವರು ವಿವಾದಿತ ಪ್ರದೇಶದಲ್ಲಿ ಹಿಂದೂ ರಚನೆಯ ಅಸ್ತಿತ್ವದ ಬಗ್ಗೆ ಹೇಳಿಕೆ ನೀಡಿದ ASI ವರದಿಯನ್ನು ಎತ್ತಿಹಿಡಿದು ರಾಮಮಂದಿರದ ಪರವಾಗಿ ತೀರ್ಪು ನೀಡಿದ್ದರು.
ನಿವೃತ್ತಿಯ 2 ದಿನದ ಹಿಂದೆಯಷ್ಟೇ , ನಜೀರ್ ಅವರು ಭಾರತ ಸರ್ಕಾರದ 2016 ರ ಭಾರತೀಯ ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸಿ ತೀರ್ಪು ನೀಡಿದ್ದರು.
ಸರಳ ವ್ಯಕ್ತಿತ್ವ:
ದೇಶದ ಅತ್ಯುನ್ನತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿದ್ದರೂ, ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದು, ಕರಾವಳಿಗೆ ಬಂದಾಗಲೆಲ್ಲಾ ಸಭೆ ಸಮಾರಂಭಗಳಲ್ಲಿ ಆಪ್ತರಾಗಿ ಮಾತನಾಡುತ್ತಾರೆ. ಕನ್ನಡ, ತುಳು ಭಾಷೆಯಲ್ಲೇ ಭಾಷಣ ಮಾಡುವುದು ಅವರ ವಿಶೇಷತೆ. ತಿಂಗಳಿಗೊಮ್ಮೆ ಊರಿನ ಮನೆಗೆ ಭೇಟಿ ನೀಡುವ ಅವರು, ಊರ ಹಿರಿಯರು, ವಕೀಲರ ಜತೆ ಮೂಡುಬಿದಿರೆ ಅಭಿವೃದ್ಧಿ ಬಗ್ಗೆ ಚರ್ಚಿಸಿಯೇ ಮರಳುವುದು ಅವರ ವಾಡಿಕೆಯಾಗಿತ್ತು.
ಸಿಜೆಐ ಡಿವೈ ಚಂದ್ರಚೂಡ್ ಹಾಗೂ ಇತರ ಸಹೋದ್ಯೋಗಿಗಳು ನ್ಯಾ| ನಜೀರ್ ಬಗ್ಗೆ ಏನೆಂದರು?
ಸಿಜೆಐ ಡಿವೈ ಚಂದ್ರಚೂಡ್ : ನ್ಯಾಯಮೂರ್ತಿ ನಜೀರ್ ಅವರು ಸರಿ ಮತ್ತು ತಪ್ಪುಗಳೆದುರು ತಟಸ್ಥರಾಗಿ ಇರುತ್ತಿರಲಿಲ್ಲ. ಬದಲಿಗೆ ಯಾವಾಗಲೂ ಸರಿಯಾದುದರ ಪರ ನಿಲ್ಲುತ್ತಿದ್ದರು. ನಾವು ಅಯೋಧ್ಯೆ ತೀರ್ಪು ನೀಡುವ ವೇಳೆ ಪೀಠವನ್ನು ಹಂಚಿಕೊಂಡಿದ್ದೇವೆ. ಅಲ್ಲದೆ ಒಟ್ಟಿಗೆ ಕೆಲಸ ಮಾಡಿದ್ದೇವೆ ಒಟ್ಟಿಗೆ ತೀರ್ಪು ನೀಡಿದ್ದೇವೆ.
( ಹಾಸ್ಯದಲ್ಲಿ)ನ್ಯಾಯಮೂರ್ತಿ ನಜೀರ್ ಅವರು ವಾಟ್ಸಾಪ್ ವಿಶ್ವವಿದ್ಯಾಲಯದ ಚಂದಾದಾರರಾಗಿದ್ದಾರೆ. ಮ್ಯಾಗ್ನೆಟ್ ಕೂಡ ಆಟಿಕೆಯಾಗಬಹುದು ಎಂದು ಅವರು ಇತ್ತೀಚೆಗಷ್ಟೇ ಮೊಮ್ಮಗನಿಂದ ಕಲಿತಿದ್ದಾರೆ.
ಇಂದು ನಾವು ಒಬ್ಬ ಶ್ರದ್ಧಾವಂತ ಮಗ, ಕಾಲೇಜು ಸಹಪಾಠಿ ಸೌಮ್ಯ ಸಹೋದ್ಯೋಗಿ, ಉಗ್ರ ವಕೀಲ, ಜನರ ನ್ಯಾಯಾಧೀಶ ಮತ್ತು ಆತ್ಮೀಯ ಸ್ನೇಹಿತನಿಗೆ ವಿದಾಯ ಹೇಳುತ್ತಿದ್ದೇವೆ.
ಎಡ್ವಕೇಟ್ ಪ್ರದೀಪ್ ರೈ: ನ್ಯಾಯಮೂರ್ತಿ ನಜೀರ್ ಅವರಿಗೆ ಗಂಗಾ ಏಕಾದಶಿ ಯಾವಾಗ ಎಂದು ತಿಳಿದಿದೆ ಯಾಕೆಂದರೆ ಉತ್ತಮ ಪಂಚಾಂಗ (ಹಿಂದೂ ಕ್ಯಾಲೆಂಡರ್) ಜ್ಞಾನವನ್ನು ಹೊಂದಿದ್ದರು.
ಎಸ್ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್: ನ್ಯಾಯಮೂರ್ತಿ ನಜೀರ್ ಅವರ ನೇಮಕವು ಕೊಲಿಜಿಯಂ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುವುದನ್ನು ಸ್ಪಷ್ಟಪಡಿಸುತ್ತದೆ. ನ್ಯಾಯಮೂರ್ತಿ ನಜೀರ್ ಯಾವುದೇ ಹಿನ್ನೆಲೆಯಿಂದ ಬಂದವರಲ್ಲ ಮತ್ತು ಅಲ್ಪಸಂಖ್ಯಾತರೂ ಆಗಿದ್ದರು. ಉತ್ತಮ ಜನರನ್ನು ನ್ಯಾಯಾಲಯಕ್ಕೆ ತರಲು ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಕೊಲಿಜಿಯಂ ತೋರಿಸುತ್ತದೆ.
ನ್ಯಾಯಮೂರ್ತಿ ನಜೀರ್ ಅವರು ಅಯೋಧ್ಯೆ ಪ್ರಕರಣದಲ್ಲಿ ಪ್ರತ್ಯೇಕ ಅಭಿಪ್ರಾಯವನ್ನು ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅವರು ನಿಜವಾಗಿಯೂ ಜಾತ್ಯತೀತ ನ್ಯಾಯಾಧೀಶರಾಗಿದ್ದರು.