ಉಡುಪಿ, ಮಾ 08(SM): ಕಾಂಗ್ರೆಸ್ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಅಸಂಬದ್ದ ಹೇಳಿಕೆ ನೀಡುತ್ತಿದೆ. ಭಾರತದ ಸೈನಿಕರ ಶೌರ್ಯವನ್ನು ಪ್ರಶ್ನಿಸುವ ಹಾಗೂ ತೇಜೋವಧೆ ಮಾಡುವ ಕೆಲಸ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಗ್ವಿಜಯ ಸಿಂಗ್, ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸೈನಿಕರ ಕಾರ್ಯದ ಬಗ್ಗೆ ಅಭಿನಂದನೆ ಸಲ್ಲಿಸಬೇಕೇ ಹೊರತು ಅನುಮಾನಿಸುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಓಟ್ ಬ್ಯಾಂಕ್ ಪೊಲಿಟಿಕ್ಸ್ ಬಿಟ್ಟು ದೇಶದ ಸುಭಿಕ್ಷೆಯ ಬಗ್ಗೆ ಕಾರ್ಯ ನಿವರ್ಹಿಸಲಿ. ಈ ರೀತಿಯ ಓಟ್ ಬ್ಯಾಂಕ್ ಪೊಲಿಟಿಕ್ಸ್ ನಡೆಸಿ ಜನರ ದಿಕ್ಕು ಬದಲಾಯಿಸುವ ಪ್ರಯತ್ನದಿಂದ ಯಾವ ಪ್ರಯೋಜನವೂ ಇಲ್ಲ. ದೇಶದ ಜನರು ಎಲ್ಲಾವನ್ನು ಗಮನಿಸುತ್ತಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಸುಮಲತಾ ಅವರ ಬಗ್ಗೆ ಸಚಿವ ರೇವಣ್ಣ ಅವಮಾನವಾಗಿ ಮಾತನಾಡಿರುವುದು ತಪ್ಪು. ಮಹಿಳೆಯರ ಬಗ್ಗೆ ಗೌರವ ನೀಡುವುದನ್ನು ಮೊದಲು ಅವರು ಕಲಿಯಬೇಕು. ಗಂಡ ಸತ್ತ ಹೆಣ್ಣು ಮಗಳು ಚುನಾವಣೆಗೆ ನಿಲ್ಲಬಾರದು ಎಂಬ ಕಾನೂನಿನಲ್ಲ. ಇಷ್ಟೇ ದಿನದ ಬಳಿಕ ನಿಲ್ಲಬೇಕು ಎಂಬ ಅಡೆ ತಡೆ ಇಲ್ಲ. ಗಂಡನನ್ನು ಕಳೆದುಕೊಂಡ ಸುಮಲತಾ ಅವರ ಬಗ್ಗೆ ಈ ರೀತಿ ಅವಮಾನವಾಗಿ ಮಾತನಾಡಿರುವುದು ಸಚಿವ ರೇವಣ್ಣ ವ್ಯಕ್ತಿತ್ವ ಎಂತಹದು ಎಂದು ತೋರಿಸುತ್ತಿದೆ ಎಂದರು.
ಇನ್ನು ಅವರು ಈ ಕೂಡಲೇ ಸುಮಲತಾ ಬಳಿ ಕ್ಷಮೆ ಕೇಳಬೇಕು. ಸುಮಲತಾ ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಅವರನ್ನು ಬಿಜೆಪಿಗೆ ಸೆಳೆಯುವ ಕೆಲಸ ನಡೆದಿಲ್ಲ. ಅವರಾಗಿಯೇ ಬಿಜೆಪಿಗೆ ಬಂದರೆ ಸ್ವಾಗತಕೋರುತ್ತೇವೆ. ಪಕ್ಷ ಬಿಟ್ಟು ಪಕ್ಷೇತರರಾಗಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ನಮ್ಮ ಪಕ್ಷ ಅವರಿಗೆ ಬೆಂಬಲ ನೀಡಲಿದೆ ಎಂದರು.