ಬಂಟ್ವಾಳ, ಜ 03 (DaijiworldNews/SM): ಜನವರಿ 3 ರಂದು ನಡೆಯುವ ಕಾರ್ಮಿಕ ಬೇಡಿಕೆ ದಿನಾಚರಣೆ ಅಂಗವಾಗಿ ಬಂಟ್ವಾಳ ಹಾಗೂ ವಿಟ್ಲ ತಾಲೂಕು ಬಿಎಂಎಸ್ ವತಿಯಿಂದ ಬಂಟ್ವಾಳ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನಿಹರಿಸದೇ ಉದಾಸೀನ ತೋರುತ್ತಿರುವುದು, ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಮನವಿ ನೀಡಲಾಯಿತು. ಕೂಡಲೇ ರಾಜ್ಯ ಸರ್ಕಾರವು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಬಿಎಂಎಸ್ ನಿಯೋಗದ ಜೊತೆ ಮಾತನಾಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಕಾರ್ಮಿಕ ಹೋರಾಟವನ್ನು ಮಾಡಲಾಗುವುದೆಂದು ಪತ್ರದಲ್ಲಿ ತಿಳಿಸಲಾಯಿತು. ಹಾಗೇಯೇ ಸ್ಥಳೀಯ ಸಮಸ್ಯೆಯಾದ ರಾಜ್ಯ ಸರ್ಕಾರ ಯೋಜನಾ ಪ್ರಾಧಿಕಾರ ಆಗದ ಪ್ರದೇಶದಲ್ಲಿ ರದ್ದುಪಡಿಸಿದ ಸಿಂಗಲ್ ಲೇಔಟ್ ಅನುಮತಿಯನ್ನು ವಿಟ್ಲ ಪಟ್ಟಣ ಪಂಚಾಯತ್ ಪ್ರದೇಶದಲ್ಲಿ ಕೂಡಲೇ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಲಾಯಿತು. ಇದರಿಂದ ಕಟ್ಟಡ ನಿರ್ಮಾಣ ಆಗದೇ ಕಾರ್ಮಿಕರಿಗೆ ಕೆಲಸವಿಲ್ಲದೇ ಅನ್ಯಾಯವಾಗುತ್ತಿದೆ ಎಂದು ತಿಳಿಸಲಾಯಿತು.
ಆಟೋ ಚಾಲಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೂಡ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಎ, ತಾಲೂಕು ಅಧ್ಯಕ್ಷ ರಾಜೇಶ್ ಬೊಬ್ಬೆಕೇರಿ, ಕಾರ್ಯದರ್ಶಿ ಸಂತೋಷ್ ಕುಮಾರ್ ಕಲ್ಮಲೆ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಕಿರಣ್ ರಾವ್ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.