ವಿಶೇಷ ವರದಿ: ಮುಹಮ್ಮದ್ ಅಲಿ ವಿಟ್ಲ
ವಿಟ್ಲ,ಮಾ 08 (MSP): ಸರ್ಕಾರದ ಮೂಲಸೌಕರ್ಯ ಯೋಜನೆಗಳು ವ್ಯವಸ್ಥಿತವಾಗಿ ಅನುಷ್ಟಾನಗೊಳ್ಳುವುದಿಲ್ಲ ಎನ್ನುವುದಕ್ಕೆ ಇಲ್ಲೊಂದು ಜೀವಂತ ಉದಾಹರಣೆ ಇದೆ. ಬಂಟ್ವಾಳ ತಾಲ್ಲೂಕಿನ ಮಂಚಿ ಗ್ರಾಮದಲ್ಲಿ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ರೇಶನ್ ಕಾರ್ಡ್, ಆಧಾರ್ ಕಾರ್ಡ್ ಇದ್ದರೂ 40ವರ್ಷದಿಂದ ಮನೆಯೊಂದು ಇನ್ನು ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿದೆ.
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಿ ಕಟ್ಟೆ ಎಂಬಲ್ಲಿ ಜೀವನ ನಡೆಸುತ್ತಿರುವ ಅವಿವಾಹಿತ ಗಿರಿಜಾ ಅವರು ಕಳೆದ 40 ವರ್ಷಗಳಿಂದ ಕತ್ತಲಲ್ಲಿ ಜೀವನ ನಡೆಸುತ್ತಿದ್ದಾರೆ. 37 ವರ್ಷ ಪ್ರಾಯದ ಗಿರಿಜಾ ಅವರ ಹೆತ್ತವರು ವಾಸವಾಗಿದ್ದ ಮನೆ ಇದಾಗಿದ್ದು ,ಕುಟುಂಬದ ಸದಸ್ಯರು ಬೇರೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಇನ್ನೂ ಮದುವೆಯಾಗದ ಕಾರಣ ಅವರು ಇದೇ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಒಬ್ಬಂಟಿಯಾಗಬಾರದೆಂಬ ದೆಸೆಯಿಂದ ಅವರ ಸಂಬಂಧಿ ವ್ಯಕ್ತಿಯೊಬ್ಬರು ಸಾಥ್ ನೀಡುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ಇವರು ಕತ್ತಲಲ್ಲಿ ಜೀವನ ನಡೆಸುತ್ತಿರುವ ಬಗ್ಗೆ ಗಮನ ಹರಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯವರು ಇವರಿಗೆ ಸೋಲರ್ ದೀಪದ ವ್ಯವಸ್ಥೆ ಕಲ್ಪಿಸಿದ್ದರು. ಕೆಲವು ವರ್ಷಗಳಿಂದ ಅದು ಕೆಟ್ಟು ಹೋಗಿದೆ. ಇದೀಗ ಸೀಮೆ ಎಣ್ಣೆ ದೀಪದಲ್ಲಿ ದಿನ ಕಳೆಯುತ್ತಿದ್ದಾರೆ. ಗಿರಿಜಾ ಅವರಲ್ಲಿ ಆಧಾರ್ ಕಾರ್ಡ್, ಮತದಾನ ಚೀಟಿ, ಎಲ್ಲವೂ ಇದೆ. ಈಗಾಗಲೇ 94ಸಿ ಅಡಿಯಲ್ಲಿ ಹಕ್ಕು ಪತ್ರ ಪಡೆಯಲು ಅರ್ಜಿ ಕೂಡ ಸಲ್ಲಿಸಲಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಮಾತ್ರ ಕ್ಷುಲ್ಲಕ ಕಾರಣಗಳನ್ನು ನೀಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಗ್ರಾಮ ಪಂಚಾಯಿತಿ ಇವರಿಗೆ ಕೇವಲ ಎನ್ಓಸಿ ನೀಡಿದರೆ ಸಾಕು. ಇವರಿಗೆ ಸಂಪರ್ಕದ ವೆಚ್ಚವನ್ನು ನಾವೇ ನೀಡುತ್ತೇವೆ ಎಂದು ಎಸ್ಡಿಪಿಐ ಮುಖಂಡರು ಭರವಸೆ ನೀಡಿದ್ದಾರೆ.
ಈ ವಿವಾದ ಹತ್ತು ವರ್ಷಗಳ ಹಿಂದೆಯೇ ಇದೆ. ಗಿರಿಜಾ ಅವರಲ್ಲಿ ಮನೆನಂಬ್ರ ಇಲ್ಲ. ರೇಶನ್ ಕಾರ್ಡ್ ಹಲವು ವರ್ಷಗಳ ಹಿಂದೆಯೇ ಮಾನವೀಯ ದೃಷ್ಟಿಯಲ್ಲಿ ನೀಡಲಾಗಿತ್ತು. ಇವರ ಮನೆ ಖಾಸಗಿ ವ್ಯಕ್ತಿಯ ವರ್ಗ ಜಾಗದ ಸಮೀಪ ಇದ್ದು, ಪರಂಬೋಕ್ ತೋಡು ಕೂಡ ಇದೆ. ಇದರಿಂದ ಖಾಸಗಿ ವ್ಯಕ್ತಿಯವರು ಆಕ್ಷೇಪ ವ್ಯಕ್ತಪಡಿಸಿ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ಅದಲ್ಲದೇ ರಸ್ತೆ ಬದಿಯಲ್ಲಿ ಮನೆ ಇರುವುದರಿಂದ ಲೋಕೋಪಯೋಗಿ ಇಲಾಖೆಯ ಅನುಮತಿ ಅಗತ್ಯವಾಗಿದೆ. ಆದುದರಿಂದ ವಿದ್ಯುತ್ ಸಂಪರ್ಕಕ್ಕೆ ಎನ್ಓಸಿ ಕೊಡಲು ಕಾನೂನು ತೊಡಕು ಇದೆ ಎಂದು ಮಂಚಿ ಗ್ರಾಮ ಪಂಚಾಯಿತಿ ತಿಳಿಸಿದೆ.
ಮಂಚಿ ವಲಯ ಎಸ್ಡಿಪಿಐ ನಿಯೋಗದೊಂದಿಗೆ ಇತ್ತೀಚೆಗೆ ಗ್ರಾಮ ಪಂಚಾಯಿತಿಗೆ, ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿ ಪತ್ರಗಳು ಕಸದ ಬುಟ್ಟಿ ಸೇರುತ್ತಿದೆ. ಮೆಸ್ಕಾಂ ಇಲಾಖೆಯವರು ಗ್ರಾಮ ಪಂಚಾಯಿತಿನಿಂದ ಎನ್ಓಸಿ ತಂದರೆ ಮಾತ್ರ ವಿದ್ಯುತ್ ಸಂಪರ್ಕ ನೀಡುವುದಾಗಿ ಹೇಳುತ್ತಿದ್ದಾರೆ. ಇತ್ತ ಗ್ರಾಮ ಪಂಚಾಯಿತಿನವರು ಎನ್ಓಸಿ ನೀಡಲು ಖಾಸಗಿ ವ್ಯಕ್ತಿಯ ಕುಟುಂಬಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪತ್ರ ತರಬೇಕು ಎಂದು ಹೇಳುವ ಮೂಲಕ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸ್ಥಳೀಯ ಎಸ್ಡಿಪಿಐ ಮುಖಂಡರು ಆರೋಪ ಮಾಡಿದ್ದಾರೆ.