ಪುತ್ತೂರು, ಜ. 02 ( DaijiworldNews/MS): ಅಡಿಕೆ ಬೆಳೆಗೆ ಭವಿಷ್ಯವಿಲ್ಲ ಎನ್ನುವ ಹೇಳಿಕೆ ನೀಡಿದ ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿಕೆಯನ್ನು ಖಂಡಿಸಿ ಪುತ್ತೂರು ಬ್ಲಾಕ್ ಕಾಂಗ್ರೇಸ್ ವತಿಯಿಂದ ಜ.2 ರಂದು ಪ್ರತಿಭಟನೆ ನಡೆಯಿತು.
ಪುತ್ತೂರು ಅಮರ್ ಜವಾನ್ ಜ್ಯೋತಿ ಬಳಿ ಸೇರಿದ ಪ್ರತಿಭಟನಾಕಾರರು ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಗೃಹಸಚಿವ ಅರಗ ಜ್ಞಾನೇಂದ್ರ ಅಡಿಕೆಯ ಭವಿಷ್ಯದ ಬಗ್ಗೆ ಮಾತನಾಡುವ ಮೂಲಕ ಬಿಜೆಪಿಯ ನಿಜ ಬಣ್ಣ ಬಯಲು ಮಾಡಿದ್ದಾರೆ. ಅಡಿಕೆಯ ಮಾನ ಕಳೆದಂತೆ ಅಡಿಕೆ ಬೆಳೆಗಾರರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಬಿಜೆಪಿಯ ಮಾನ ಕಳೆಯಬೇಕಿದೆ. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರವಿದ್ದ ಸಮಯದಲ್ಲಿ ಅಡಿಕೆಗೆ ಬೆಂಬಲ ಬೆಲೆ, ಅಡಿಕೆ ಕೊಳೆರೋಗಕ್ಕೆ ಸೂಕ್ತ ಪರಿಹಾರ ನೀಡುವ ಕೆಲಸ ಮಾಡಿದೆ. ಆದರೆ ಬಿಜೆಪಿ ಸರಕಾರ ಅಡಿಕೆ ಬೆಳೆಗಾರರನ್ನೇ ಮುಗಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಅವರು ಆರೋಪಿಸಿದರು.