ಉಳ್ಳಾಲ, ಜ 02 ( DaijiworldNews/MS): ತಲಪಾಡಿ ಕಿನ್ಯಾ ಮಾರ್ಗವಾಗಿ ನಾಟೆಕಲ್ ಸಂಚರಿಸುವ ಬಸ್ಸುಗಳು ವಿನಾ ಕಾರಣ ಭಾನುವಾರ ಸಂಚಾರ ಸ್ಥಗಿತಗೊಳಿಸುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಅರೋಪಿಸಿ ಕಿನ್ಯಾ ಗ್ರಾಮಸ್ಥರು, ಕಿನ್ಯಾದಲ್ಲಿ ಬಸ್ ತಡೆದು ಪ್ರತಿಭಟಿಸಿದರು.ಕಿನ್ಯಾ ಭಾಗದ ಜನರಿಗೆ ನಾಟೆಕಲ್ ಮೂಲಕ ಸೀಮಿತ ಖಾಸಗಿ ಬಸ್ಸುಗಳಿವೆ.
ಭಾನುವಾರ ದಿನ ಅನೇಕ ಕಾರ್ಯಕ್ರಮ ಇದ್ದು, ಬಸ್ಸುಗಳ ತಮ್ಮ ಸಂಚಾರ ವನ್ನೇ ಸ್ಥಗಿತಗೊಳಿಸಿದೆ. ಇದರಿಂದ ರಿಕ್ಷಾ ಮೂಲಕ ಜಾಸ್ತಿ ಹಣ ವ್ಯಯಿಸಿ ಪ್ರಯಾಣಿಸಬೇಕಾಗಿದೆ. ಪರ್ಮಿಟ್ ಹಲವು ಇದ್ದರೂ, ಅದರಲ್ಲಿರುವ ನಿಬಂಧನೆಗಳನ್ನು ಪಾಲಿಸದೆ ಖಾಸಗಿ ಬಸ್ ತಿರುಗಾಡುತ್ತಿದೆ.ಅರ್ಧ ದಾರಿಯಲ್ಲಿ ಪ್ರಯಾಣಿಕರನ್ನು ಇಳಿಸಿ ರಸ್ತೆ ಬದಲಿಸಿ ಹೋಗುತ್ತಿದೆ. ಇನ್ನು ಕೆಲವು ಭಾನುವಾರ ರಸ್ತೆಗೇ ಇಳಿಯುತ್ತಿಲ್ಲ. ಇನ್ನು ಕೆಲವು ಮದುವೆ ಸಮಾರಂಭಗಳ ಟ್ರಿಪ್ ನಡೆಸುತ್ತಿವೆ. ಇದರಿಂದ ಊರಿನ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಅನ್ನುವ ಆರೋಪ ಮಾಡಿದ್ದಾರೆ.
ಪ್ರತಿಭಟನಾ ನಂತರ ಬಸ್ಸಿನ ಮಾಲೀಕರನ್ನು ಕರೆಸಿ ಚರ್ಚಿಸಿ ಎಚ್ಚರಿಕೆ ನೀಡಿದ ನಂತರ ಬಸ್ಸಿನ ಮಾಲಕರ ಭರವಸೆ ಮೇರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಕಿನ್ಯಾ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಸಿರಾಜುದ್ದೀನ್ ಕಿನ್ಯಾ, ಮಾಲಿನಿ ನಾರಾಯಣ ಪೂಜಾರಿ, ಬಾಬು ಶಾಸ್ತ, ಪಾರ್ಥಸಾರಥಿ ಕಿನ್ಯಾ ಮುಂತಾದವರು ಇದ್ದರು.