ಮಂಗಳೂರು, ಜ 01 (DaijiworldNews/SM): ಪಣಂಬೂರು ಬೀಚ್ ನಲ್ಲಿರುವ ಆಹಾರ ಮಳಿಗೆಗಳ ಮೇಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ದಿಢೀರ್ ದಾಳಿ ನಡೆಸಿ ಹತ್ತಕ್ಕೂ ಅಧಿಕ ಅಂಗಡಿಗಳಲ್ಲಿ ಸ್ವಚ್ಛತೆಯ ಕೊರತೆ ಕಂಡು ಬಂದಿರುವುದರಿಂದ ತಕ್ಷಣ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.
ಪತ್ರಕರ್ತರ ಸಂಘ, ದ.ಕ. ಜಿಲ್ಲಾಡಳಿತ ಸಹಿತ ಬ್ರಾಂಡ್ ಮಂಗಳೂರಿನ ಪರಿಕಲ್ಪನೆಯಲ್ಲಿ ಸಮುದ್ರ ಕಿನಾರೆಯ ಸ್ವಚ್ಛತೆಗೆ ಯೋಜನೆಯನ್ನು ಹಮ್ಮಿಕೊಂಡು ಅದರಂತೆ ಜಿಲ್ಲಾಧಿಕಾರಿ ಉದ್ಘಾಟನೆಗೆ ಆಗಮಿಸಿದ್ದರು. ಬಳಿಕ ಆಹಾರ ಸ್ಟಾಲ್ ಗಳು ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಪರಿಸರ ಸ್ವಚ್ಛತೆಯ ಕುರಿತು ಕ್ಲಾಸ್ ತೆಗೆದುಕೊಂಡರು.
ಈ ನಡುವೆ ಶೌಚಾಲಯದ ಮುಂಭಾಗ ಅಕ್ರಮವಾಗಿ ಕಟ್ಟಲ್ಪಟ್ಟ ಗೋಬಿ ಮಂಚೂರಿ ಅಂಗಡಿಗೆ ತೆರಳಿದ ಅವರು ಅಲ್ಲಿಯ ಶುಚಿತ್ವದ ಕೊರತೆ ಕಂಡು ತೀವ್ರ ಆಕ್ರೋಷಿತರಾಗಿ ತಕ್ಷಣ ಅಂಗಡಿ ಮುಚ್ಚುವಂತೆ ಆದೇಶ ನೀಡಿದ್ದಾರೆ. ಕೊಳೆತ ತರಕಾರಿಗಳು, ಹಲವು ದಿನಗಳಿಂದ ಉಪಯೋಗಿಸುತ್ತಿರುವ ಅಡುಗೆ ಎಣ್ಣೆ ಹಾಗೂ ಶೌಚಾಲಯವನ್ನೇ ದಿನಸಿ ಸಾಮಾನುಗಳನ್ನು ಸಂಗ್ರಹಿಸಿ ಇಡಲು ಕೋಣೆಯನ್ನಾಗಿ ಪರಿವರ್ತಿಸಿದನ್ನು ಕಂಡು ದಿಗ್ಗಮೆಗೊಂಡರು.
ಬಳಿಕ ಸಮೀಪದ ಎಲ್ಲಾ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಶುಚಿತ್ವದ ಕೊರತೆ ಕಂಡು ಬಂದ ಮಳಿಗೆಗಳ ಮೇಲೆ ಬೀಗ ಮುದ್ರಿಸುವಂತೆ ಸೂಚನೆ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಫಾಸ್ಟ್ ಫುಡ್ ಅಂಗಡಿಯೊಂದರಲ್ಲಂತೂ ಕ್ಯಾಬೇಜ್ ಬಳಸಿ ಗೋಬಿಮಂಚೂರಿ ಮಾಡುತ್ತಿರುವುದು ಕೂಡಾ ಪತ್ತೆಯಾಗಿದೆ. ಎಲ್ಲಾ ಅಂಗಡಿ ಮಾಲಕರಿಗೂ ಕೂಡಾ ಸ್ವಚ್ಛತೆಯ ವಿಚಾರದಲ್ಲಿ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಒಟ್ಟಿನಲ್ಲಿ, ವ್ಯಾಪಾರದ ದೃಷ್ಟಿಯಿಂದ ಮಾತ್ರ ಗಮನ ನೀಡುತ್ತಿದ್ದ ಅಂಗಡಿ, ಹೋಟೆಲ್ ಮಾಲಕರಿಗೆ ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.