ಕಾರ್ಕಳ,ಜ 01 (DaijiworldNews/HR): ವಿದ್ಯಾರ್ಥಿಗಳಲ್ಲಿ ನಾಗರಿಕತೆ, ಸಂಸ್ಕೃತಿಯ ಶಿಕ್ಷಣ ಬಿತ್ತಬೇಕಿದೆ. ವಿನಾಶಕಾರಿ ಮನೋಭೂಮಿಕೆ ವಿದ್ಯಾರ್ಥಿಗಳಲ್ಲಿ ಬರಬಾರದು. ಮನುಷ್ಯರ ನಡುವೆ ಪರಸ್ಪರ ವೈರತ್ವ ಬರದಂತೆ ಜತಣದಿಂದ ಕಾಪಾಡಿಕೊಳ್ಳುವ ಅಗತ್ಯ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಿದೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಕಾರ್ಕಳ ಇದರ ರಜತಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದಲ್ಲಿ ನಾಲ್ಕು ಸ್ತಂಬಗಳು ಶಿಥಿಲಾವಸ್ಥೆಗೆ ಜಾರದಂತೆ ಎಚ್ಚರ ವಹಿಸಬೇಕಿದೆ. ಈ ಹೊಣೆ ಶಿಕ್ಷಕರ, ಪೋಷಕರ ಇಬ್ಬರ ಮೇಲಿದೆ. ಮಕ್ಕಳಿಗೆ ಅಕ್ಷರಭ್ಯಾಸ ಮಾಡಿದರೆ ಸಾಲದು ಸಮುದಾಯ, ಜ್ಞಾನದ ಪ್ರಜ್ಞೆಯ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಇಂಧನ ಸಚಿವ ವಿ.ಸುನಿಲ್ಕುಮಾರ್ ಮಾತನಾಡಿ, ಶಿಕ್ಷಣ ಪಠ್ಯದ ಓದಿಗೆ ಸೀಮಿತವಾಗಬಾರದು. ವ್ಯಕ್ತಿತ್ವ ನಿರ್ಮಾಣ, ಸಂಸ್ಕಾರ ದೊರಕಿಸಿಕೊಡುವುದು ಶಿಕ್ಷಣದ ತಿರುಳು. ಅದು ಸುಂದರ ಪುರಾಣಿಕ್ ಶಾಲೆಯಲ್ಲಿ ಜಾರಿಗೆ ಬಂದಿದೆ. ನಾಮಧೇಯದಂತೆ ಸುಂದರ ಪುರಾಣಿಕ್ ಶಾಲೆ ಅತ್ಯುತ್ತಮ ಶಿಕ್ಷಣ ಒದಗಿಸುತ್ತ ಬಂದಿದೆ ಎಂದಿದ್ದಾರೆ.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯಜಿ.ರಾ, ತುಮಕೂರು ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ರಂಗದಾಮಪ್ಪ, ಕುಣಿಗಲ್ ಶಿಕ್ಷಣಾಽಕಾರಿ ಕೆ.ಎಲ್ ಬೋರೆಗೌಡ, ಉದ್ಯಮಿ ಅರುಣ್ಪುರಾಣಿಕ್, ನ್ಯಾಯವಾಽಗಳ ಸಂಘದ ಅಧ್ಯಕ್ಷ ಸುನಿಲ್ಕುಮಾರ್ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ, ಪುರಸಭೆ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ರಜತಮಹೋತ್ಸವ ಸಮಿತಿ ಅಧ್ಯಕ್ಷ ರಮೇಶ್ ರಾವ್.ಬಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್, ವಿದ್ಯಾರ್ಥಿ ನಾಯಕ ನೈತಿಕ್ ಜಿ. ಶೆಟ್ಟಿ, ಕೀರ್ತನ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಲಕ್ಷ್ಮಿ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಕಾವ್ಯ ಭರತೇಶ್ ಸ್ವಸ್ತಿ ವಾಚನ ಮಾಡಿದರು. ದಾನಿಗಳು, ಪೂರ್ವ ಎಸ್ಡಿಎಂಸಿ ಅಧ್ಯಕ್ಷರುಗಳಿಗೆ, ಸಂಸ್ಥೆಯಲ್ಲಿ ಸೇವೆಗೈದ ಶಿಕ್ಷಕರನ್ನು ಸಮ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಹರ್ಷಿನಿ ಪ್ರಸ್ತಾವನೆಗೈದರು. ಎಸ್ಡಿಎಂಸಿ ಅಧ್ಯಕ್ಷ ವಿಜಯರಾಜ್ ಶೆಟ್ಟಿ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ನಾಗಶ್ರೀ ವಂದಿಸಿದರು. ಪ್ರತಿಮಾ ನಾಯಕ್ ನಿರೂಪಿಸಿದರು.