ಸುಳ್ಯ, ಜ 01 (DaijiworldNews/DB): ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸುಳ್ಯ ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ನಡೆದಿದೆ.
ಅಜ್ಜಾವರ ಗ್ರಾಮದ ಮೇನಾಲ ನಿವಾಸಿಯಾದ ಸುಧೀರ್ ರೈ ಅವರು ಕಳೆದ ಎರಡು ದಿನಗಳ ಹಿಂದಷ್ಟೇ ಅಜ್ಜಾವರ- ಮಂಡೆಕೋಲು ಮಾರ್ಗಮಧ್ಯೆ ಪಡ್ಡಂಬೈಲ್ ಕ್ರಾಸ್ ಎಂಬಲ್ಲಿಗೆ ಹೋಗಿ ಸೊಳ್ಳೆಗಳ ನಾಶಕ್ಕೆ ಬಳಸುವ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಮನೆಗೆ ತೆರಳಿದ್ದ ಅವರು ಮನೆಗೆ ತಲುಪುತ್ತಿದ್ದಂತೆ ವಾಂತಿ ಮಾಡತೊಡಗಿದರು. ಇದರಿಂದ ಕೂಡಲೇ ಮನೆಯವರು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.
ಆರ್ಥಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821