ಕಾಸರಗೋಡು,ಮಾ,08 (MSP): ದಕ್ಷಿಣ ಭಾರತದ ವಿವಾದಿತ ನಟಿ ಲೀನಾ ಮರಿಯಾ ಪೌಲ್ ಒಡೆತನದ ಕೊಚ್ಚಿಯಲ್ಲಿನ ಬ್ಯೂಟಿ ಪಾರ್ಲರ್ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡಿನ ಇಬ್ಬರಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಭೂಗತ ದೊರೆ ರವಿ ಪೂಜಾರಿಯ ಆದೇಶದಂತೆ ಉಪ್ಪಳ ನಿವಾಸಿಯಾದ ಶಾರ್ಪ್ ಶೂಟರ್ ಒಬ್ಬ ಈ ಬ್ಯೂಟಿ ಪಾರ್ಲರ್ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.ಉಪ್ಪಳದ ವ್ಯಕ್ತಿಯ ಜತೆಯಲ್ಲಿ ಕಾಸರಗೋಡಿನ ಕ್ರಿಮಿನಲ್ ಅಪರಾಧಿಯೊಬ್ಬನೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆರೋಪಿಗಳಿಬ್ಬರೂ ವಿದೇಶಕ್ಕೆ ಪರಾರಿಯಾಗಿದ್ದು, ಅವರನ್ನು ಕೇರಳಕ್ಕೆ ಕರೆತರುವ ಪ್ರಯತ್ನವನ್ನು ಪೊಲೀಸರು ಆರಂಭಿಸಿದ್ದಾರೆ. 2010ರಲ್ಲಿ ಚೆರ್ಕಳ ಬೇವಿಂಜೆಯ ಗುತ್ತಿಗೆದಾರ ಎಂ.ಟಿ.ಮುಹಮ್ಮದ್ ಅವರ ಮನೆಗೆ ಗುಂಡೆಸೆದು ಪರಾರಿಯಾದ ಪ್ರಕರಣದಲ್ಲೂ ಉಪ್ಪಳದ ವ್ಯಕ್ತಿ ಶಾಮೀಲಾಗಿದ್ದಾನೆ ಎಂದು ಪೊಲೀಸರಿಗೆ ತಿಳಿದು ಬಂದಿದೆ.
ಕಳೆದ ಡಿಸೆಂಬರ್ ನಲ್ಲಿ ಕೊಚ್ಚಿಯ ಪನಮ್ಪಿಲ್ಲಿ ನಗರದಲ್ಲಿ ಲೀನಾ ಬ್ಯೂಟಿ ಪಾರ್ಲರ್ ಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಮೇಲೆ ನಿಂತು ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದರು. ದುಷ್ಕರ್ಮಿಗಳು ಪಾರ್ಲರ್ ಬಳಿ ಮುಂಬೈ ಭೂಗತ ಲೋಕದ ಪಾತಕಿ ‘ರವಿ ಪೂಜಾರಿ’ ಎಂದು ಹೆಸರು ಬರೆದಿರುವ ಪೇಪರ್ ಎಸೆದು ಹೋಗಿದ್ದರು.