ಸುಬ್ರಹ್ಮಣ್ಯ, ಜ 01 (DaijiworldNews/DB): ನಿಂತಿದ್ದ ಗೂಡ್ಸ್ ರೈಲಿನಿಂದ ಅನಿಲ ಸೋರಿಕೆ ಕಾಣಿಸಿಕೊಂಡ ಘಟನೆ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಶನಿವಾರ ನಸುಕಿನ ಜಾವ ಸಂಭವಿಸಿದೆ. ಲೋಕೊಪೈಲೆಟ್ನ ಸಮಯಪ್ರಜ್ಞೆಯಿಂದ ಭಾರೀ ಅವಘಡವೊಂದು ತಪ್ಪಿದಂತಾಗಿದೆ.
ಮಂಗಳೂರಿನಿಂದ ಮಹಾರಾಷ್ಟ್ರಕ್ಕೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಸುಮಾರು 43 ಗೂಡ್ಸ್ ಪ್ಯಾನೆಲ್ಗಳ ಗೂಡ್ಸ್ ರೈಲು ಸುಬ್ರಹ್ಮಣ್ಯ ರೋಡ್ ರಥಲ್ವೇ ನಿಲ್ದಾಣದಲ್ಲಿ ಕ್ರಾಸಿಂಗ್ಗಾಗಿ ನಿಲುಗಡೆಗೊಂಡಿತ್ತು. ರಾತ್ರಿ ಗಂಟೆ 2.30ರ ಸುಮಾರಿಗೆ ರೈಲಿನಿಂದ ಲೋಕೊಪೈಲೆಟ್ ಕೆಳಗಿಳಿದು ಬಂದ ವೇಳೆ ನಾಲ್ಕನೇ ಟ್ಯಾಂಕ್ನಿಂದ ಅನಿಲ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಮಾಹಿತಿ ರವಾನಿಸಿದರು.
ತತ್ಕ್ಷಣ ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅಗ್ನಿಶಾಮಕ ದಳ ಆಗಮಿಸಿ ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಸುಳ್ಯ, ಬೆಳ್ತಂಗಡಿ, ಮಂಗಳೂರಿನಿಂದಲೂ ಅಗ್ನಿಶಾಮಕ ವಾಹನಗಳನ್ನು ತರಿಸಿ ಸಂಭಾವ್ಯ ಭಾರೀ ಅಪಾಯವನ್ನು ತಪ್ಪಿಸಲಾಯಿತು.
ಮಂಗಳೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಅವರ ನೇತೃತ್ವದಲ್ಲಿ ಪುತ್ತೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ಪಿ. ಆನಂದ್, ಮುಖ್ಯ ಅಗ್ನಿಶಾಮಕ ರುಕ್ಮಯ್ಯ ಗೌಡ, ಚಾಲಕ ಯಾದವ್, ಸಿಬಂದಿ ಮಂಜುನಾಥ್, ಗೃಹ ರಕ್ಷಕ ದಳದ ಮಂಜುನಾಥ್ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.