ಉಡುಪಿ, ಮಾ 08 (MSP): ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಬಹಳಷ್ಟು ಬಿರುಸು ಪಡೆದುಕೊಂಡಿದೆ. ಈ ಮಧ್ಯೆ ಬಿಜೆಪಿಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಗಾಗಿ ಆಕಾಂಕ್ಷಿಗಳ ನಡುವೆ ಪೈಪೋಟಿ ಶುರುವಾಗಿದೆ. ಆದರೆ ಬಿಜೆಪಿ ಹೈಕಮಾಂಡ್ ಯುವ ನಾಯಕನಿಗೆ ಮಣೆ ಹಾಕಲಿದೆ ಎಂಬ ಅಂಶ ಹೊರಬಿದ್ದಿದೆ.
ಈ ವಿಚಾರ ಸದ್ಯ ಬಿಜೆಪಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೆ ಆತಂಕ ಮೂಡಿಸಿದೆ. ಆದರೆ ದ.ಕ. ಮತ್ತು ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ, ಬಿಜೆಪಿ ಯುವ ಮುಖಂಡ ಯಶ್ ಪಾಲ್ ಸುವರ್ಣ ಅವರ ಆಸೆಗೆ ಬಲ ತುಂಬಿದೆ.
ಶೋಭಾ ಸ್ಪರ್ಧೆಗೆ ಸ್ವಪಕ್ಷಿಯರೇ ವಿರೋಧ:
ಹಾಲಿ ಸಂಸದೆ ಶೋಭಾ ಅವರ ಸ್ಪರ್ಧೆ ವಿಚಾರದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಸೇರಿದಂತೆ ಬಹುತೇಕ ಮುಖಂಡರಿಗೆ ಅಸಮಾಧಾನವಿದೆ. ಕಳೆದ ಬಾರಿ ಗೆದ್ದ ಬಳಿಕ ಶೋಭಾ ಅವರು ಉಡುಪಿಯ ಕಡೆಗೆ ಅಷ್ಟಾಗಿ ಗಮನ ನೀಡಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಲ್ಲ. ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 ಎ ರಸ್ತೆ, ಪ್ಲೈಓವರ್ ಕಾಮಗಾರಿ ಪೂರ್ಣಗೊಳಿಸುವುದರಲ್ಲಿ ವಿಳಂಬ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ. ಹೀಗೆ ಹಲವಾರು ಕಾರಣಗಳಿಂದ ಕ್ಷೇತ್ರದ ಜನತೆ ಹಾಗೂ ಬಿಜೆಪಿ ಪಕ್ಷದವರಿಗೆ ಆಕ್ರೋಶವಿದೆ. ಅಲ್ಲದೆ ಸಂಸದೆಯ ವೈಫಲ್ಯದಿಂದಾಗಿ ಹಲವಾರು ಬಾರಿ ಬಿಜೆಪಿ ಶಾಸಕರೇ ಮುಜುಗರಕ್ಕೆ ಒಳಗಾಗಬೇಕಾದ ಪ್ರಸಂಗ ಎದುರಾಗಿತ್ತು. ಕ್ಷೇತ್ರಕ್ಕೆ ಭೇಟಿ ನೀಡದೆ ರಾಜ್ಯ ರಾಜಕಾರಣದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಸಂಸದೆಯ ವಿರುದ್ಧ ಇಡೀ ಕ್ಷೇತ್ರದ ಜನರಲ್ಲಿ ಆಕ್ರೋಶವಿದೆ. ಹಾಗಾಗಿ ಮತ್ತೆ ಇವರಿಗೆ ಟಿಕೆಟ್ ನೀಡಬಾರದೆಂದು ಸ್ವಪಕ್ಷಿಯರೇ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆಗ್ಡೆ ಆಸೆಗೆ ಆರ್ ಎಸ್ಎಸ್ ಅಡ್ಡಿ:
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಸ್ಪರ್ಧೆಗೆ ಪಕ್ಷದಲ್ಲಿ ಅಷ್ಟಾಗಿ ವಿರೋಧ ಇಲ್ಲದಿದ್ದರೂ ಸಂಘಪರಿವಾರದ ವಿರೋಧ ಇದೆ ಎಂಬ ಮಾತು ಕೇಳಿಬರುತ್ತಿದೆ. ಈ ಕ್ಷೇತ್ರದಲ್ಲಿ ಸಂಘಪರಿವಾರದ ಪ್ರಾಬಲ್ಯ ಹೆಚ್ಚಿರುವುದರಿಂದ ಜಾತ್ಯತೀತ ಚಿಂತನೆಯುಳ್ಳ ಹೆಗ್ಡೆ ಅವರಿಗೆ ಟಿಕೆಟ್ ನೀಡಲು ಎರ್ ಎಸ್ಎಸ್ ಸಮ್ಮತಿ ಸೂಚಿಸುವುದು ಕಷ್ಟ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅಲ್ಲದೆ ಹೆಗ್ಡೆ ಸ್ಪರ್ಧೆಗೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ತೀವ್ರ ವಿರೋಧ ಇದೆ ಎನ್ನಲಾಗುತ್ತಿದ್ದು, ನನಗೆ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ನಾನು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ಶೋಭಾ ಅವರು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಹೆಗ್ಡೆ ಅವರಿಗೆ ಬಿಜೆಪಿಯ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿ ಟಿಕೆಟ್ ಪಡೆಯುವಷ್ಟು ಸಾಮರ್ಥ್ಯ ಇಲ್ಲ. ಅಲ್ಲದೆ, ಹೆಗ್ಡೆ ಕಾಂಗ್ರೆಸ್ ನಿಂದ ಉಚ್ಚಾಟನೆಗೊಂಡ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿ ಕೇವಲ ಒಂದುವರೆ ವರ್ಷಗಳಾಗಿವೆ ಅಷ್ಟೇ. ಬಿಜೆಪಿ ಕಾರ್ಯಕರ್ತರು ಸಹ ಅವರನ್ನು ಸಂಪೂರ್ಣವಾಗಿ ನಮ್ಮ ನಾಯಕರೆಂದು ಒಪ್ಪಿಕೊಂಡಿಲ್ಲ. ಪಕ್ಷದಲ್ಲೂ ಅವರು ಅಷ್ಟು ಸಕ್ರಿಯರಾಗಿಲ್ಲ. ಈ ದಿಸೆಯಲ್ಲಿ ನೋಡಿದರೆ ಹೆಗ್ಡೆ ಅವರ ಸ್ಪರ್ಧೆಗೆ ಬಿಜೆಪಿ ಅವಕಾಶ ಮಾಡಿಕೊಡುವುದು ಕಷ್ಟ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿ ಅವರು ಜೆಡಿಎಸ್ ನತ್ತಾ ಮುಖ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಮೊಗವೀರ ಸಮುದಾಯಕ್ಕೆ ಆದ್ಯತೆ:
ಜಾತಿ ಲೆಕ್ಕಾಚಾರದಲ್ಲಿ ನೋಡಿದರೆ ಕರಾವಳಿ ಭಾಗದಲ್ಲಿ ಮೊಗವೀರ ಸಮುದಾಯ ಕೂಡ ಪ್ರಬಲ ಸಮುದಾಯವಾಗಿದೆ. ಅಲ್ಲದೆ ಈ ಸಮುದಾಯದ ಅಭ್ಯರ್ಥಿಗಳಿಗೆ ಬೇರೆ ಕಡೆಗಳಲ್ಲಿ ಟಿಕೆಟ್ ನೀಡಲು ಅಸಾಧ್ಯವಾಗಿರುವುದರಿಂದ ಮೊಗವೀರ ಸಮುದಾಯಕ್ಕೆ ಸೇರಿದ ಯಶ್ ಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಮೀನುಗಾರ ಸಮುದಾಯಕ್ಕೆ ಆದ್ಯತೆ ನೀಡಲು ತೀರ್ಮಾನಿಸಿದೆ. ಅಲ್ಲದೆ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಎಂಬ ಕಾರ್ಯಕರ್ತರ ಆಗ್ರಹಕ್ಕೂ ಮನ್ನಣೆ ನೀಡಿದಂತೆ ಆಗುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿದೆ ಎನ್ನಲಾಗುತ್ತಿದೆ.
ಹೊಸ ಮುಖಕ್ಕೆ ಅವಕಾಶ:
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಭಾಗದ ಬಹುತೇಕ ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಿ ಯಶಸ್ಸು ಕಂಡಿದ್ದ ಬಿಜೆಪಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಅದೇ ಪ್ರಯೋಗವನ್ನು ಮಾಡಲಿದೆ ಎನ್ನಲಾಗುತ್ತಿದೆ. ಬಹುತೇಕ ಯುವ ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸುತ್ತಿರುವುದರಿಂದ ಯುವ ನಾಯಕನಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಯಶ್ ಪಾಲ್ ಈಗಾಗಲೇ ಎರಡನ್ಮೂರು ಭಾರೀ ದೆಹಲಿಗೆ ಭೇಟಿ ನೀಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಇತರೆ ನಾಯಕರನ್ನು ಭೇಟಿಯಾಗಿ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದಾರೆ. ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಪರಿಗಣಿಸುತ್ತೇವೆ ಎಂಬ ಭರವಸೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಹಾಲಿ ಹಾಗೂ ಮಾಜಿ ಸಂಸದರ ಸಂಘರ್ಷದ ನಡುವೆ ಯಶ್ ಪಾಲ್ ಸುವರ್ಣ ಹೈಕಮಾಂಡ್ ಮನವೊಲಿಸಿ ಟಿಕೆಟ್ ದಕ್ಕಿಸಿಕೊಳ್ಳುತ್ತಾರ ಎಂಬುವುದನ್ನು ಕಾದುನೋಡಬೇಕಿದೆ.