ಮಂಗಳೂರು, ಡಿ 31 (DaijiworldNews/HR): ಮಂಗಳೂರು ನಗರದಾದ್ಯಂತ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.
ಈ ಕುರಿತು ದೈಜಿವರ್ಲ್ಡ್ ಸಂದರ್ಶನದಲ್ಲಿ ಮಾತನಾಡಿದ ಅವರು, ಹೊಸ ವರ್ಷದ ಪಾರ್ಟಿ ಆಯೋಜಿಸುವವರು ಡಿ.31ರಂದು 12:30ಕ್ಕೆ ಕಾರ್ಯಕ್ರಮ ಮುಗಿಸಬೇಕು. ಅನುಮತಿ ಪಡೆದಿದ್ದರೂ ರಾತ್ರಿ 10 ಗಂಟೆಗೆ ಧ್ವನಿವರ್ಧಕಗಳನ್ನು ಬಂದ್ ಮಾಡಬೇಕು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 32 ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದ್ದು, ಈ ಪೈಕಿ 16 ಚೆಕ್ ಪಾಯಿಂಟ್ ಗಳಿರುತ್ತವೆ. ಅತಿ ವೇಗ, ಅಜಾಗರೂಕತೆಯ ವಾಹನ ಚಾಲನೆಯ ಮೇಲೆ ನಿಗಾ ವಹಿಸಲಾಗುವುದು ಎಂದರು.
ಇನ್ನು ರಾತ್ರಿ 12:30ಕ್ಕೆ ಎಲ್ಲವೂ ಬಂದ್ ಆಗಬೇಕು. ಆ ಬಳಿಕ ಯಾರೂ ರಸ್ತೆಯಲ್ಲಿ ಇರಬಾರದು. ತ್ರಿಬಲ್ ರೈಡಿಂಗ್ ಅಥವಾ ಮದ್ಯಪಾನ ಮಾಡಿ ವಾಹನ ಚಾಲನೆಗೆ ಅವಕಾಶ ಇರುವುದಿಲ್ಲ. ಅದೇರೀತಿ ಬೀಚ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆದೇ ಕಾರ್ಯಕ್ರಮ ಆಯೋಜಿಸಬೇಕು. ಪರವಾನಿಗೆ ಇಲ್ಲದೇ ಯಾವುದೇ ಆಚರಣೆಗೆ ಅವಕಾಶವಿಲ್ಲ ಎಂದಿದ್ದಾರೆ.