ಉಡುಪಿ, ಡಿ 31 (DaijiworldNews/HR): ಕೋವಿಡ್ ರೂಪಾಂತರಿಯ ಹರಡುವಿಕೆಯನ್ನು ತಡೆಗಟ್ಟಲು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಮುಂಜಾಗೃತ ಕ್ರಮವಾಗಿ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ಹೊಸ ವರ್ಷಕ್ಕೆ ಸಂಬಂಧಿಸಿದಂತೆ ದಿನಾಂಕ: 31-12-2022, 01-01-2023 ಮತ್ತು 02.01.2023 ರಂದು ಆಚರಿಸಲಾಗುವ ಎಲ್ಲಾ ಸಮಾರಂಭಗಳನ್ನು ಮಧ್ಯರಾತ್ರಿ: 01-00 ಗಂಟೆಯ ಒಳಗಾಗಿ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು.
ದೊಡ್ಡ ಪ್ರಮಾಣದಲ್ಲಿ ನಡೆಸುವ ಸಮಾರಂಭಗಳನ್ನು ಕಡಾಯವಾಗಿ ಹೊರಾಂಗಣದಲ್ಲಿ ಬೆಳಗಿನ ಹೊತ್ತಿನಲ್ಲಿ ನಡೆಸತಕ್ಕದ್ದು. ಸಾಧ್ಯವಾದಷ್ಟು ಮುಂಜಾನೆ ಹಾಗೂ ತಡರಾತ್ರಿಯ ಸಮಯದಲ್ಲಿ ಆಚರಣೆ ಮಾಡುವುದನ್ನು ತಪ್ಪಿಸಬೇಕು.
ಸಾರ್ವಜನಿಕರು ಸೇರುವ ಪ್ರದೇಶ/ಸ್ಥಳಗಳಲ್ಲಿ ಆಸನ ಸಾಮರ್ಥ್ಯ ಮೀರದಂತೆ ಮುಖ್ಯವಾಗಿ ಒಳಾಂಗಣ ಪ್ರದೇಶ /ಸ್ಥಳಗಳಾದ ಹೋಟೆಲ್ಸ್/ಬಾರ್ ಅಂಡ್ ರೆಸ್ಟೋರೆಂಟ್ಸ್/ರೆಸಾಟ್ಸ್/ಪಬ್ ಕ್ಲಬ್ ಇತ್ಯಾದಿಗಳಲ್ಲಿನ ಆಸನ ಸಾಮರ್ಥ್ಯ ಮೀರದಂತೆ ಸಂಬಂಧಪಟ್ಟ ಮಾಲೀಕರು/ವ್ಯವಸ್ಥಾಪಕರುಗಳು ಕ್ರಮಕೈಗೊಳ್ಳಬೇಕು.
ಎಲ್ಲಾ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಛೇರಿಗಳು, ಬಸ್ ನಿಲ್ದಾಣಗಳು, ಪ್ರಾರ್ಥನಾ ಮಂದಿರ/ಪೂಜಾ ಮಂದಿರ/ದೇವಸ್ಥಾನಗಳು, ಅಂಗಡಿ ಮುಂಗಟ್ಟುಗಳು, ಕೈಗಾರಿಕೆ ಹಾಗೂ ಇತರೆ ಕಾರ್ಖಾನೆಗಳು ಇತ್ಯಾದಿ ಪ್ರದೇಶ ಗಳಲ್ಲಿ ಮುಖಗವಸವನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದು ಕಡ್ಡಾಯವಾಗಿರುತ್ತದೆ.
ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಹಾಗೂ ಇತ್ಯಾದಿ ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ಪ್ರೇರಿತರಾಗಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು
60 ವರ್ಷ ಮೇಲ್ಪಟ್ಟ ವಯಸ್ಕರರು, ಅನಾರೋಗ್ಯದಿಂದ ಬಳಲುತ್ತಿರುವವರು, ಗರ್ಭಿಣಿಯರು ಮತ್ತು ಬಾಣಂತಿಯರು ಇಂತಹ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ದೂರವಿರುವುದು.
ಸಮಾರಂಭಗಳು, ಹೋಟೆಲ್ಸ್/ಬಾರ್ ಅಂಡ್ ರೆಸ್ಟೋರೆಂಟ್ಸ್/ರೆಸಾಟ್ಸ್/ಪಬ್/ಕ್ಲಬ್ ಮತ್ತು ಇತ್ಯಾದಿಗಳ ಆಯೋಜಕರು/ವ್ಯವಸ್ಥಾಪಕರು ಹಾಗೂ ಸೇವಾ ಸಿಬ್ಬಂದಿಗಳು ಆದ್ಯತೆ ಮೇರೆಗೆ ಬೂಸ್ಟರ್ ಡೋಸ್ ಅನ್ನು ಪಡೆಯುವುದು. ಕನಿಷ್ಠ ಎರಡು ಡೋಸ್ ಲಸಿಕೆಗಳನ್ನು ಪಡೆಯುವುದನ್ನು ನಿರೀಕ್ಷಿಸಲಾಗಿದೆ.
ಇನ್ನು ಸಿನಿಮಾ ಮಂದಿರಗಳಿಗೆ ಚಲನಚಿತ್ರಗಳನ್ನು ವೀಕ್ಷಿಸಲು ಹೋಗುವ ಪ್ರತಿಯೊಬ್ಬ ಪ್ರೇಕ್ಷಕರು N-95 ಮುಖಗವಸನ್ನು ಕಡ್ಡಾಯವಾಗಿ ಧರಿಸಬೇಕು. ಈ ಬಗ್ಗೆ ಪವೇಶ ದ್ವಾರದಲ್ಲಿರುವ ಸಿಬ್ಬಂದಿಗಳು ಪ್ರೇಕ್ಷಕರಿಗೆ ತಿಳಿ ಹೇಳಲು ಸೂಚಿಸಲಾಗಿದೆ.