ಮಂಗಳೂರು, ಡಿ 30 ( DaijiworldNews/SM): ಕರಾವಳಿಯಲ್ಲಿ ರೈತರು ಅಡಿಕೆ ಬೆಳೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಇಲ್ಲಿನ ರೈತರು ಬುದ್ಧಿವಂತರಾಗಿದ್ದು, ಲಾಭದಾಯಕ ಕೃಷಿಯತ್ತ ಹೆಚ್ಚಿನ ಒಲವು ತೋರುತ್ತಾರೆ. ಅದರಂತೆ ವಾಣಿಜ್ಯ ಬೆಳೆಯಾಗಿ ಅಡಿಕೆಯನ್ನು ಬೆಳೆಯುತ್ತಿದ್ದು, ಇದೀಗ ಅನವಶ್ಯಕವಾಗಿ ರೈತರಲ್ಲಿ ಭಯ ಹುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ. ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರ ಪರವಾಗಿ ಸರಕಾರ ನಿಲ್ಲಬೇಕಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಕಾರ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕು. ಅಡಿಕೆಗೆ ವಿದೇಶಿ ಅಮಾದು ಭೀತಿ ಎದುರಾಗಿದೆ. ಇದರಿಂದಾಗಿ ಸ್ಥಳೀಯವಾಗಿ ಬೆಳೆದ ಅಡಿಕೆಗೆ ಬೇಡಿಕೆ ಕಡಿಮೆಯಾಗುತ್ತದೆ. ಹೇರಳವಾಗಿ ಅಡಿಕೆ ಬೆಳೆದರೂ ಬೆಲೆ ಕುಸಿತದ ಭೀತಿ ಎದುರಾಗಿದೆ. ವಿದೇಶಿ ಆಮದು ನಿಲ್ಲಿಸಿ ಸ್ಥಳೀಯ ರೈತರಿಗೆ ಬೆಂಬಲ ನೀಡಬೇಕು. ಅಡಿಕೆಗೆ ಎದುರಾಗಿರುವ ಎಲೆಚುಕ್ಕಿ ರೋಗಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದುಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಈ ನಡುವೆ ವಿಧಾನಸಭೆಯಲ್ಲಿ ಅಡಿಕೆಗೆ ಭವಿಷ್ಯವಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಗೊಂದಲದ ಹೇಳಿಕೆ ನೀಡಿದ್ದಾರೆ. ಇದು ರೈತರ ನಿದ್ದೆಗೆಡಿಸಿದೆ. ಮೊದಲೇ ರೋಗ ಬಾಧೆಗಳಿಂದ ಕಂಗೆಟ್ಟ ರೈತರಿಗೆ ಇದೀಗ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಸರಕಾರ ತಕ್ಷಣಕ್ಕೆ ಅಡಿಕೆಗೆ ಎದುರಾಗಿರುವ ರೋಗಕ್ಕೆ ಸೂಕ್ತ ಪರಿಹಾರ ಹಾಗೂ ಅಡಿಕೆ ಆಮದು ತಡೆಯಬೇಕೆಂದು ಅವರು ತಿಳಿಸಿದ್ದಾರೆ.