ಮೂಡಬಿದಿರೆ, ಡಿ 30 (DaijiworldNews/DB): ವಕೀಲಿಕೆ ಎಂಬುದು ಬುದ್ದಿವಂತಿಕೆಯ ವೃತ್ತಿ. ನ್ಯಾಯವಾದಿಗಳು ಸಾರ್ವಜನಿಕರಿಗೆ ತ್ವರಿತ ನ್ಯಾಯ ಒದಗಿಸಲು ಪ್ರಯತ್ನಿಸಬೇಕು ಎಂದು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಹೇಳಿದ್ದಾರೆ.
ದ.ಕ. ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಮೂಡುಬಿದ್ರೆ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಮೂಡುಬಿದ್ರೆಯ ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಹಾಗೂ ವಕೀಲರ ಭವನವನ್ನು ಡಿಸೆಂಬರ್ 30ರ ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಕೀಲಿಕೆ ಎಂಬುದು ಹಣ ಗಳಿಸುವ ವೃತ್ತಿಯಲ್ಲ, ಇದು ಸೇವೆ ನೀಡುವ ವೃತ್ತಿ. ಬುದ್ದಿವಂತಿಕೆಯ ವೃತ್ತಿಯಿದು. ಯಾವುದೇ ವ್ಯಾಜ್ಯಗಳನ್ನು ತ್ವರಿತಗತಿಯಲ್ಲಿ ಪರಿಹರಿಸಿ ಜನರಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ವಕೀಲರು ಮಾಡಬೇಕು ಎಂದು ಅವರು ಆಶಿಸಿದರು.
ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಅಲ್ಲಿ ವ್ಯಾಜ್ಯಗಳೇ ಇರಬಾರದು. ಹೀಗಾಗಿ ವರ್ಷಾನುಗಟ್ಟಲೆ ಯಾವುದೇ ವ್ಯಾಜ್ಯಗಳನ್ನು ಇರಿಸಿಕೊಳ್ಳದೆ ಶೀಘ್ರ ನ್ಯಾಯ ದೊರಕಿಸಿಕೊಡುವಲ್ಲಿ ತೊಡಗಿಸಿಕೊಳ್ಳಬೇಕು. ಅಂತಹ ಕ್ಲಿಸ್ಟಕರ ವ್ಯಾಜ್ಯಗಳೇನಾದರೂ ಇದ್ದಲ್ಲಿ ಪರಿಹಾರಕ್ಕೆ ಸಮಯ ತಗುಲಬಹುದು ಎಂದವರು ತಿಳಿಸಿದರು.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳೊಂದಿಗೆ ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರೂ ವಕೀಲರ ಭವನದ ಲೋಕಾರ್ಪಣೆ ಕಾರ್ಯ ನೆರವೇರಿಸಿದರು. ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಬಿ. ವೀರಪ್ಪ, ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್, ಪ್ರದೀಪ್ ಸಿಂಗ್ ಯೆರೂರ್, ಎಸ್. ವಿಶ್ವಜಿತ್ ಶೆಟ್ಟಿ, ಸಿ. ಎಂ. ಜೋಶಿ, ಟಿ.ಜಿ. ಶಿವಶಂಕರೇಗೌಡ ಉಪಸ್ಥಿತರಿದ್ದರು.
ಮೂಡುಬಿದ್ರೆ ಶಾಸಕ ಉಮಾನಾಥ ಎ. ಕೋಟ್ಯಾನ್, ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ, ರಾಜ್ಯ ಹೈಕೋರ್ಟ್ ಮಹಾ ಲೇಖನಾಧಿಕಾರಿ ಮುರಳೀಧರ ಪೈ ಬಿ., ಹಿರಿಯ ವಕೀಲ ಹಾಗೂ ಬೆಂಗಳೂರಿನ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಪಿ.ಪಿ. ಹೆಗ್ಡೆ, ಮೂಡುಬಿದ್ರೆ ವಕೀಲರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಭಾಗವಹಿಸಿದ್ದರು.