ಮಂಗಳೂರು, ಡಿ 30 (DaijiworldNews/DB): ಇತ್ತೀಚೆಗೆ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಟೋ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರ ಮನೆ ನವೀಕರಣ ಕಾಮಗಾರಿ ಶುಕ್ರವಾರ ವೈದಿಕ ವಿಧಾನಗಳ ಮೂಲಕ ನೆರವೇರಿತು.
ಗುರುಬೆಳದಿಂಗಳು ಫೌಂಡೇಶನ್ ನೇತೃತ್ವದಲ್ಲಿ ಬಿಲ್ಲವ ಬ್ರಿಗೇಡ್ ಸಹಕಾರದಲ್ಲಿ ಮನೆ ನವೀಕರಣ ಕಾರ್ಯ ನಡೆಯಲಿದೆ. ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್., ಇಂಜಿನಿಯರ್ ದೀವರಾಜ್, ಬಿಲ್ಲವ ಬ್ರಿಗೇಡ್ ಗೌರವಾಧ್ಯಕ್ಷ ಸದಾನಂದ ಪೂಜಾರಿ, ಸೂರಜ್ ಕುಮಾರ್ ಕಲ್ಯ, ಅಧ್ಯಕ್ಷ ಅವಿನಾಶ್, ಸಾಮಾಜಿಕ ಹೋರಾಟಗಾರ ದಿಲ್ರಾಜ್ ಆಳ್ವ, ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ರವಿ ಚಿಲಿಂಬಿ, ವಕ್ತಾರ ರಾಜೇಂದ್ರ ಚಿಲಿಂಬಿ, ಕಾಂಟ್ರ್ಯಾಕ್ಟರ್ ಭರತ್ರಾಮ್, ಕಂಕನಾಡಿ ಬಿಲ್ಲವ ಸಂಘದ ಜಯ ಪೂಜಾರಿ, ರಾಜೇಶ್ ಸುವರ್ಣ ಬಂಟ್ವಾಳ, ಸುನೀಲ್ ಕುಮಾರ್, ಪುರುಷೋತ್ತಮ ಪೂಜಾರಿಯವರ ಪತ್ನಿ, ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.
ಆಸ್ಪತ್ರೆಯಲ್ಲಿರುವ ಪುರುಷೋತ್ತಮ ಪೂಜಾರಿಯವರನ್ನು ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ತಂಡದೊಂದಿಗೆ ಭೇಟಿಯಾದಾಗ ತನ್ನ ನೋವಿನ ಜತೆಗೆ ಬರುವ ಮೇ ತಿಂಗಳಿನಲ್ಲಿ ಮಗಳ ಮದುವೆ ನಿಗದಿಯಾಗಿದ್ದು, ಅದಕ್ಕಿಂತ ಮುನ್ನ ಮನೆ ನವೀಕರಣ ಮಾಡಬೇಕು ಎಂಬ ಕನಸಿತ್ತು ಎಂಬುದನ್ನು ಹೇಳಿಕೊಂಡಿದ್ದರು. ಈ ವೇಳೆ ಮನೆ ನವೀಕರಣದ ಜವಾಬ್ದಾರಿಯನ್ನು ಗುರುಬೆಳದಿಂಗಳು ಫೌಂಡೇಶನ್ ವಹಿಸಲಿದೆ ಎನ್ನುವ ಮೂಲಕ ಪದ್ಮರಾಜ್ ಅವರು ಪುರುಷೋತ್ತಮ ಪೂಜಾರಿ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದರು.