ಉಡುಪಿ, ಮಾ.7(AZM): ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಪೂರ್ವ ತಯಾರಿ ನಡೆದಿದ್ದು,ಕಳೆದ ಜ.16ರಂದು ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 9,90,773 ಮತದಾರರಿದ್ದು, ಈ ಬಾರಿ 1,111 ಮತಗಟ್ಟೆಗಳನ್ನು ತೆರೆಯಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಈಗಾಗಲೇ ಮಾನ್ಯತೆ ಪಡೆದ ಎಲ್ಲಾ ರಾಷ್ಟ್ರೀಯ ಪಕ್ಷಗಳಿಗೆ ಮತದಾರರ ಉಚಿತ ಪಟ್ಟಿಯನ್ನು ಒದಗಿಸಲಾಗಿದೆ. ಈ ವರ್ಷ ಚುನಾವಣೆ ನಡೆಯಲಿರುವುದರಿಂದ ಪರಿಷ್ಕರಣೆ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿ ನಾಮಪತ್ರ ಸ್ವೀಕರಿಸಲು ಪ್ರಾರಂಭ ಗೊಳ್ಳುವವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ ಎಂದರು.
ಈ ದಿನಾಂಕದವರೆಗೆ ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಮತದಾರರ ಪೂರಕ ಪಟ್ಟಿಯನ್ನು ತಯಾರಿಸಿ ಮೂಲ ಮತದಾರರ ಪಟ್ಟಿಗೆ ಜೋಡಿಸಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ಎರಡು ಬಾರಿ ಮಿಂಚಿನ ನೋಂದಾವಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 4,77,243 ಪುರುಷ, 5,13,514 ಮಹಿಳೆಯರು ಹಾಗೂ 16 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 9,90,773 ಮತದಾರರಿದ್ದಾರೆ. ಈ ಬಾರಿ ಬೈಂದೂರಿನಲ್ಲಿ 246, ಕುಂದಾಪುರದಲ್ಲಿ 222, ಉಡುಪಿಯಲ್ಲಿ 226, ಕಾಪುನಲ್ಲಿ 208 ಹಾಗೂ ಕಾರ್ಕಳಲ್ಲಿ 209 ಮತಗಟ್ಟೆಗಳು ಇರಲಿವೆ ಎಂದು ತಿಳಿಸಿದರು.
ಜಿಲ್ಲೆಯ 50ಕ್ಕೂ ಅಧಿಕ ಮತಗಟ್ಟೆಗಳಿಗೆ ತಾನು ಖುದ್ದಾಗಿ ಹೋಗಿ ಪರಿಶೀಲಿಸಿದ್ದೇನೆ. ಇನ್ನುಳಿದ ಮತಗಟ್ಟೆಗಳಿಗೆ ಎಡಿಸಿ ಹಾಗೂ ಇತರ ಅಧಿಕಾರಿಗಳು ತೆರಳಿ ಅಲ್ಲಿರುವ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ಪ್ರತಿಯೊಂದು ಮತಗಟ್ಟೆಗಳಿಗೂ ಬೇಕಿರುವ ರ್ಯಾಂಪ್, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಪೀಠೋಪಕರಣ, ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಹಾಗೂ ಮತಗಟ್ಟೆಯ ಸಿಬ್ಬಂದಿಗಳಿಗೆ ಉಟೋಪಚಾರದ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಹೆಪ್ಸಿಬಾ ರಾಣಿ ತಿಳಿಸಿದ್ದಾರೆ.