ಮಂಗಳೂರು, ಡಿ 29 (DaijiworldNews/DB): ಪದವಿ ಪೂರ್ವ ವಿದ್ಯಾಭ್ಯಾಸದ ಹಂತದಲ್ಲಿ ಅತ್ಯುತ್ತಮ ಪರಿಶ್ರಮ ಪಡುವ ಮೂಲಕ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬಹುದು ಎಂದು ಕ್ಯಾನ್ಸರ್ ಚಿಕಿತ್ಸಾ ತಜ್ಞ ಹಾಗೂ ಎಕ್ಸ್ಪರ್ಟ್ ಹಳೆ ವಿದ್ಯಾರ್ಥಿ ಡಾ. ಹೇಮಂತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಳಚ್ಚಿಲ್ ಕ್ಯಾಂಪಸ್ನಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ 37ನೇ ವಾರ್ಷಿಕ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣಗೈದು ಮಾತನಾಡಿದರು.
ವಿದ್ಯಾರ್ಥಿಗಳು ಪ್ರತಿಯೊಬ್ಬರನ್ನೂ ಗೌರವ ಭಾವದಿಂದ ಕಾಣಬೇಕು ಹಾಗೂ ಜೀವನದ ಪ್ರತಿಕ್ಷಣವನ್ನು ಆನಂದಿಸಬೇಕು ಎಂದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರು ವಾರ್ಷಿಕ ದಿನಾಚರಣೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ. ನಾಯಕ್, ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕರಿಪ್ಪಾಲ್, ಉಪ ಪ್ರಾಂಶುಪಾಲ (ಆಡಳಿತ) ರಾಘವೇಂದ್ರ ಶೆಣೈ, ಉಪ ಪ್ರಾಂಶುಪಾಲ (ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ದೇಶಕಿ ಧೃತಿ ವಿ. ಹೆಗ್ಡೆ ಸ್ವಾಗತಿಸಿ, ವಿದ್ಯಾರ್ಥಿನಿ ಧೃತಿ ಎಚ್.ಎಸ್. ನಿರೂಪಿಸಿ, ವಂದಿಸಿದರು. ಬಳಿಕ ವಿವಿಧ ಸ್ಪರ್ಧೆಗಳು ನಡೆಯಿತು.