ಸುಳ್ಯ, ಡಿ 29 (DaijiworldNews/DB): ಕೆಲ ತಿಂಗಳ ಹಿಂದೆ ಪ್ರತ್ಯೇಕವಾಗಿ ನಾಪತ್ತೆಯಾಗಿದ್ದ ಸಂಪಾಜೆ ಮೂಲದ ಇಬ್ಬರು ಮಹಿಳೆಯರನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಾಪತ್ತೆಯಾಗಿದ್ದ ಮಹಾಲಕ್ಷ್ಮೀ ಎಂಬಾಕೆಯನ್ನು ಬೆಳ್ತಂಗಡಿಯಲ್ಲಿ ಹಾಗೂ ನಾಗವೇಣಿ ಎಂಬಾಕೆಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಪತ್ತೆ ಹಚ್ಚಲಾಗಿದೆ. ಮಹಿಳೆಯರ ನಾಪತ್ತೆ ದೂರು ದಾಖಲಾದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ರಾಜ್ಯದ ವಿವಿಧ ಕಡೆಗಳಿಂದ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಮಹಾಲಕ್ಷ್ಮಿ ಬೆಳ್ತಂಗಡಿಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಸೇರಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿ ಆಕೆಯನ್ನು ಸುಳ್ಯ ಠಾಣೆಗೆ ಕರೆ ತಂದಿದ್ದಾರೆ. ಬಳಿಕ ಮನೆಯವರನ್ನು ಕರೆಸಿ ಮಾತುಕತೆ ನಡೆಸಿ ಆಕೆಯನ್ನು ಮನೆಯವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ಇನ್ನು ನಾಗವೇಣಿ ಪುಣೆಯಲ್ಲಿ ತನ್ನ ಪ್ರಿಯಕರನೊಂದಿಗಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಆಕೆಯ ಪತಿಯೊಂದಿಗೆ ಪುಣೆಗೆ ತೆರಳಿದ ಪೊಲೀಸರು ಆಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆಕೆ ಪತಿಯೊಂದಿಗೆ ಬರಲು ನಿರಾಕರಿಸಿ ಪ್ರಿಯಕರನೊಂದಿಗೆ ಇರುವುದಾಗಿ ಪಟ್ಟು ಹಿಡಿದಿದ್ದಾಳೆ. ಬಳಿಕ ಇಬ್ಬರ ವಿಚಾರಣೆ ನಡೆಸಿ ಹೇಳಿಕಗಳನ್ನು ಪಡೆದುಕೊಂಡು ಪೊಲೀಸರು ವಾಪಸ್ಸಾಗಿದ್ದಾರೆ. ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕ ದಿಲೀಪ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.