ಕುಂದಾಪುರ, ಡಿ 29 (DaijiworldNews/DB): ಅನಧಿಕೃತ ಆವೆ ಮಣ್ಣಿನ ಗಣಿಗಾರಿಕೆಯಿಂದ ತೊಂದರೆಯಾಗುತ್ತಿರುವ ಬಗ್ಗೆ ಸ್ಥಳೀಯರು ದೂರಿತ್ತ ಹಿನ್ನೆಲೆಯಲ್ಲಿ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿದ್ದ ಮಹಿಳಾ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಬೇಳೂರು ದಿನಕರ ಶೆಟ್ಟಿ ವಿರುದ್ದ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇಲಟ್ಟು ಪರಿಸರದಲ್ಲಿ ಆವೆ ಮಣ್ಣಿನ ಗಣಿಗಾರಿಕೆ ಅನಧಿಕೃತವಾಗಿ ನಡೆಯುತ್ತಿದ್ದು, ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿ ಸಂಧ್ಯಾ ಕುಮಾರಿ ಡಿಸೆಂಬರ್ 26ರಂದು ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗಣಿಗಾರಿಕೆ ಜಾಗಕ್ಕೆ ಸಂಬಂಧಿಸಿದವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತನಗೆ ನೀಡುವಂತೆ ಸ್ಥಳೀಯರಲ್ಲಿ ಸಂಧ್ಯಾಕುಮಾರಿ ಹೇಳಿದ್ದರು. ಸ್ಥಳೀಯರು ಬಸೂರು ಗ್ರಾಮ ಪಂಚಾಯತ್ ಸದಸ್ಯ ಬೇಳೂರು ದಿನಕರ ಶೆಟ್ಟಿ ಅವರಿಗೆ ತಮ್ಮ ಮೊಬೈಲ್ನಿಂದ ಕರೆ ಮಾಡಿ ಅಧಿಕಾರಿಗೆ ನೀಡಿದ್ದಾರೆ.
ಈ ವೇಳೆ ಅಧಿಕಾರಿ ಸಂಧ್ಯಾಕುಮಾರಿ ಅವರು ಕೊಜೆ ಮಣ್ಣು ತೆಗೆಯುವ ಜಾಗ ನಿಮ್ಮದಾ? ಮಣ್ಣು ಅಗೆಯಲು ಪರವಾನಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ದರ್ಪದಿಂದ ಮಾತನಾಡಿದ ದಿನಕರ್ ಶೆಟ್ಟಿ ಮಹಿಳಾ ಅಧಿಕಾರಿ ಎಂಬ ಸೌಜನ್ಯವನ್ನೂ ತೋರದೆ ಅವಾಚ್ಯ ಮತ್ತು ಅಶ್ಲೀಲವಾಗಿ ನಿಂದಿಸಿದ್ದಾರೆ. ಅಲ್ಲದೆ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.