ಸುಳ್ಯ, ಡಿ 28 (DaijiworldNews/HR): ನಗರ ಪಂಚಾಯತ್ ಕಚೇರಿ ಆವರಣದಲ್ಲಿ ತುಂಬಿಡಲಾಗಿರುವ ಕಸದ ರಾಶಿಯನ್ನು ನೋಡಿ ದ.ಕ.ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅವರು ಗರಂ ಆಗಿ ನಗರ ಪಂಚಾಯತ್ ಅಧಿಕಾರಿಗಳನ್ನು ತೀವ್ರ ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.
ಸುಳ್ಯ ನಗರ ಪಂಚಾಯತ್ಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಕಸದ ರಾಶಿಯನ್ನು ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಶಿಯನ್ನು ಕೂಡಲೇ ತೆರವು ಮಾಡಲು ಕ್ರಮ ಕೈಗೊಳ್ಳಲು ಆದೇಶ ನೀಡಿದರು. ಕಸ ಸಾಗಾಟಕ್ಕೆ ಟೆಂಡರ್ ಮಾಡಲು ಕಡತಗಳನ್ನು ಸಿದ್ಧಪಡಿಸಿ ಕಳಿಸುವಂತೆ ಅವರು ಮುಖ್ಯಾಧಿಕಾರಿಗಳಿಗೆ ಆದೇಶ ನೀಡಿದರು.
ಇನ್ನು ಈ ರೀತಿ ಕಸದ ರಾಶಿ ಹಾಕಿರುವುದರಿಂದ ಈ ಕಸದಿಂದ ಮಲಿನಗೊಂಡ ನೀರು ಹರಿದು ಹಳ್ಳ ಕೊಳ್ಳಗಳನ್ನು ಸೇರುವ ಸಾಧ್ಯತೆ ಇದೆ. ಅಲ್ಲದೆ ಭೂಮಿಗೆ ಇಂಗಿ ಬೋರ್ವೆಲ್ಗಳಿಗೂ ಸೇರಿ ನೀರು ಮಲಿನಗೊಳ್ಳುವ ಅಪಾಯ ಇದೆ. ನೀರು ಮಲಿನವಾದರೆ ಜಾಂಡೀಸ್, ಮಲೇರಿಯಾ, ಡೆಂಗ್ಯೂ, ಇಲಿ ಜ್ಚರ ಸೇರಿದಂತೆ ಸಾಂಕ್ರಾಮಿ ರೋಗಗಳು ಹರಡುವ ಸಾಧ್ಯತೆ ಇದೆ. ಇಲ್ಲಿ ಹಾಕಿದ ಕಸದಲ್ಲಿ ಸೊಳ್ಳೆ ಉತ್ಪಾದನೆ ಮಾಡಿ ನಗರ ಪಂಚಾಯತ್ ವತಿಯಿಂದ ಇಡೀ ತಾಲೂಕಿಗೆ ರೋಗ ಹರಡುತ್ತೀರಾ ಎಂದು ಗರಂ ಆಗಿ ಪ್ರಶ್ನಿಸಿದರು.
ನಗರ ಪಂಚಾಯತ್ ಶೆಡ್ನಲ್ಲಿ ಮತ್ತು ಕಚೇರಿ ಹಿಂಭಾಗದಲ್ಲಿ ತುಂಬಿರುವ ಕಸದ ರಾಶಿಯನ್ನು ತೆರವು ಮಾಡಲು ಕೂಡಲೇ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು.