ಬಂಟ್ವಾಳ, ಡಿ 27 (DaijiworldNews/DB): ಬಂಟ್ವಾಳ ನಗರ ಠಾಣಾ ವ್ಯಾಪ್ತಿ ಸೇರಿದಂತೆ ವಿವಿಧೆಡೆ ನಡೆಸಿದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ನಿವಾಸಿ ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ. ಬಿ.ಸಿ.ರೋಡ್ ಸಮೀಪದ ಗಾಣದಪಡುವಿನಲ್ಲಿ ಹೋಲ್ಸೇಲ್ ಅಂಗಡಿಯೊಂದರ ಶಟರ್ ಬೀಗ ಮುರಿದು 20 ಸಾವಿರ ರೂ. ಮೌಲ್ಯದ 2 ಮೊಬೈಲ್ಗಳು ಹಾಗೂ 10 ಸಾವಿರ ರೂ. ನಗದನ್ನು ಕಳವುಗೈದಿದ್ದ. ಈ ಸಂಬಂಧ ಅಂಗಡಿ ಮಾಲಕರು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇನ್ನು ಇದೇ ಆರೋಪಿ ಬಿ.ಸಿ.ರೋಡ್ ವಾಣಿಜ್ಯ ಸಂಕೀರ್ಣವೊಂದರಲ್ಲಿದ್ದ ವಕೀಲರೊಬ್ಬರ ಕಚೇರಿಯಿಂದಲೂ 3 ಸಾವಿರ ರೂ. ಎಗರಿಸಿದ್ದ. ಉಪ್ಪಿನಂಗಡಿ ಗೋಳಿತೊಟ್ಟುವಿನ ಮನೆಯೊಂದರ ಬೀಗ ಮುರಿದು ಹಣ ಕಳವುಗೈದಿದ್ದ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದರು. ಬಂಟ್ವಾಳ ನಗರ ಠಾಣಾ ಇನ್ಸ್ಪೆಕ್ಟರ್ ವಿವೇಕಾನಂದ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ನಗರ ಠಾಣಾ ಪಿಎಸ್ಐಗಳಾದ ಅವಿನಾಶ್, ಕಲೈಮಾರ್, ಸಿಬಂದಿ ರಾಜೇಶ್, ಇರ್ಷಾದ್, ಗಣೇಶ್ ಹಾಗೂ ಪ್ರವೀಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.