ಕಡಬ, ಡಿ 27 (DaijiworldNews/DB): ಸ್ಕೂಟಿಗೆ ಸ್ಕಾರ್ಪಿಯೋ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಡಬ ಸಮೀಪದ ಕಳಾರದಲ್ಲಿ ಸೋಮವಾರ ಸಂಜೆ ನಡೆದಿದೆ.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಳಾರ ನಿವಾಸಿ ಉಮ್ಮರ್ (50) ಸಾವನ್ನಪ್ಪಿದವರು. ಕಡಬ ಕಡೆಯಿಂದ ಉಪ್ಪಿನಂಗಡಿ-ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬಂದ ಉಮ್ಮರ್ ಕಳಾರ ಬಳಿಕ ತನ್ನ ಮನೆಯತ್ತ ಸ್ಕೂಟಿ ತಿರುಗಿಸುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಕಾರು ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಉಮ್ಮರ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಉಮ್ಮರ್ ಮನೆ ರಸ್ತೆ ಪಕ್ಕದಲ್ಲೇ ಇರುವುದರಿಂದ ಅವರ ಪತ್ನಿ ಮನೆಯಲ್ಲಿ ಪತಿಯ ಬರುವಿಕೆಯನ್ನು ನೋಡುತ್ತಿದ್ದರು. ಪತ್ನಿಯ ಕಣ್ಣೆದುರೇ ಉಮ್ಮರ್ ಅವರ ಸ್ಕೂಟಿಗೆ ಕಾರು ಢಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳಕ್ಕೆ ಓಡಿ ಬಂದ ಪುತ್ರ ಆಟೋವೊಂದರಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೃತ ಉಮ್ಮರ್ ಟಿಂಬರ್ ವ್ಯವಹಾರ ನಡೆಸುತ್ತಿದ್ದರು.