ಮಂಗಳೂರು, ಡಿ 26 (DaijiworldNews/DB): ಹೊಸ ವರ್ಷ ಸಂಭ್ರಮಾಚರಣೆ ವೇಳೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿ ಜಿಲ್ಲಾಧಿಕಾರಿಯವರು ಸೋಮವಾರ ಆದೇಶಿಸಿದ್ದಾರೆ.
ಡಿಸೆಂಬರ್ 31 ಮತ್ತು ಜನವರಿ 1ರಂದು ಹೊಸ ವರ್ಷಾಚರಣೆ ನಡೆಯಲಿದೆ. ಆದರೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ 12.30ರ ಬಳಿಕ ನೋಂದಾಯಿತ/ಅಧಿಕೃತ ಪಬ್, ರೆಸ್ಟೋರೆಂಟ್, ಕ್ಲಬ್, ಹೊಟೇಲ್ಗಳಲ್ಲಿ ಕಾರ್ಯಕ್ರಮ ನಡೆಸುವಂತಿಲ್ಲ. ನಿಗದಿತ ಅವಧಿಗೆ ಮುನ್ನ ಕಾರ್ಯಕ್ರಮ ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಅಲ್ಲದೆ ರಾತ್ರಿ 10ರ ಬಳಿಕ ಧ್ವನಿವರ್ಧಕ, ವಿದ್ಯುನ್ಮಾನ ಉಪಕರಣ ಹಾಗೂ ಶಬ್ದ ಉಂಟು ಮಾಡುವ ಉಪಕರಣಗಳನ್ನು ಬಳಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ದಿನನಿತ್ಯ ನಡೆಯುವ ಕ್ಲಬ್, ಪಬ್, ರೆಸ್ಟೋರೆಂಟ್ಗಳ ದೈನಂದಿನ ವ್ಯವಹಾರ ನಡೆಸಲು ಹಾಗೂ ಪರ್ಮಿಟ್ನಂತೆ ನಿಗದಿತ ಸಮಯದೊಳಗಾಗಿ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು. ನಿಯಮ ಮೀರಿ ಕಾರ್ಯಕ್ರಮ ನಡೆಸುವಂತಿಲ್ಲ. ಎಲ್ಲಾ ಕಡೆಯೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ನಡೆಸಬೇಕು. ಕಾನೂನುಬಾಹಿರ ಚಟುವಟಿಕೆ ನಡೆದಲ್ಲಿ ಇಂತಹ ಸಂಸ್ಥೆಗಳ ಮಾಲಕರೇ ಹೊಣೆಯಾಗುತ್ತಾರೆ. ಅಶ್ಲೀಲ ನೃತ್ಯ, ಡ್ರಗ್ಸ್, ಗಾಂಜಾ, ಅಫೀಮು ಮತ್ತಿತರ ಮತ್ತೇರಿಸುವ ಅಮಲು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಸಭಾಂಗಣ, ತೆರೆದ ಸ್ಥಳ, ಹೊರಾಂಗಣ ಪ್ರದೇಶಗಳಾದ ಕಲ್ಯಾಣ ಮಂಟಪ, ಸಭಾಭವನ, ಸರ್ವೀಸ್ ಅಪಾರ್ಟ್ಮೆಂಟ್, ಕಡಲ ತೀರ, ಹೋಂಸ್ಟೇ, ಮಾಲ್ ಮುಂತಾದ ತೆರೆದ ಪ್ರದೇಶಗಳಲ್ಲಿ ಡಿಜೆ, ಡಾಲ್ಬಿ ಡಾನ್ಸ್ಗಳನ್ನು ನಡೆಸುವಂತಿಲ್ಲ. ವಿಶೇಷ ಕಾರ್ಯಕ್ರಮ, ವಿಶೇಷ ಪಾರ್ಟಿ ಆಯೋಜಿಸುವ ಮುನ್ನ ಕಡ್ಡಾಯವಾಗಿ ನಗರ ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕು ಎಂದು ನಿರ್ದೇಶಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಅಂತಹ ಕಾರ್ಯಕ್ರಮಗಳ ಮೇಲ್ವಿಚಾರಕರು, ಆಯೋಜಕರು ಸುಪ್ರೀಂಕೋರ್ಟ್ ಆದೇಶ ಮತ್ತು ಸರ್ಕಾರದ ನಿಯಮ ಪಾಲನೆ ಮಾಡಬೇಕು.
ಅಧಿಕೃತ/ನೋಂದಾಯಿತ ಕೇಂದ್ರಗಳಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು, ಅಪರಿಚಿತರು, ಸಮಾಜಘಾತುಕ ಶಕ್ತಿಗಳು ಕಂಡು ಬಂದಲ್ಲಿ ತತ್ಕ್ಷಣ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆ, ಪಾಲಿಕೆ, ಪ್ರವಾಸೋದ್ಯಮ ಇಲಾಖೆ ಹಾಗೂ ಅಬಕಾರಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
3 ತಂಡಗಳ ಗಸ್ತು ಪಡೆ
ಹೊಸ ವರ್ಷ ಸಂಭ್ರಮಾಚರಣೆಯಂದು ಕಾನೂನು ಸುವ್ಯವಸ್ಥೆಗೆ ಯಾವುದೇ ದಕ್ಕೆಯಾಗದಂತೆ ನಿಗಾ ವಹಿಸಲು ಪೊಲೀಸ್ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳನ್ನೊಳಗೊಂಡ 3 ತಂಡಗಳ ಗಸ್ತು ಪಡೆಯನ್ನು ರಚಿಸಲಾಗಿದೆ ಎಂದಿದ್ದಾರೆ.